ಮೈಸೂರು,ಆಗಸ್ಟ್,23,2023(www.justkannada.in): ಮೈಸೂರಿನಲ್ಲಿ ಕಾವೇರಿ ಗಲಾಟೆ ಕಾವೇರಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ಧನ್ನ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ರೈತಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.
ಕಾವೇರಿ ನೀರು ಉಳಿವಿಗಾಗಿ ಮೈಸೂರಿನ ಗನ್ ಹೌಸ್ ವೃತ್ತದ ಬಳಿಯಿರುವ ಕುವೆಂಪು ಪಾರ್ಕ್ ನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಪಕ್ಷದ ಮುಖಂಡರು,ಕಾರ್ಯಕರ್ತರು ,ರೈತ ಸಂಘಟನೆಗಳು ಭಾಗಿಯಾಗಿದ್ದವು. ರೈತರ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದ್ದು ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪಾಲ್ಗೊಂಡಿದ್ದರು.
ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ
ಗನ್ ಹೌಸ್ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ನಡೆಸಿದ ರೈತ ಮುಖಂಡರು ಕಾಡಾ ಕಚೇರಿಯಲ್ಲಿರುವ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಖಾಲಿ ಕೊಡ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್,ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಭಾಗಿಯಾಗಿದ್ದರು.
ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ..
ಪ್ರತಿಭಟನೆ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ಸರ್ವ ಪಕ್ಷಗಳ ಸಭೆ ನಾಟಕೀಯ ಸಭೆ. ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ. ರಾಜ್ಯದ ಜಲಾಶಯಗಳಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ತಮಿಳುನಾಡಿಗೆ ಹರಿದಿದೆ. ಈಗ ಸರ್ವ ಪಕ್ಷ ಸಭೆ ಕರೆದಿರುವುದು ಯಾವುದೇ ಪ್ರಯೋಜನವಿಲ್ಲ. ಇದು ಕಣ್ಣೋರೆಸುವ ತಂತ್ರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಂತರ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯ ಸರ್ಕಾರ ಕರೆದಿರುವುದು ಸರ್ವ ಪಕ್ಷ ಸಭೆಯಲ್ಲ. ರಾಜ್ಯವನ್ನ ಲೂಟಿ ಮಾಡಿದ ಪಕ್ಷಗಳ ಸಭೆಯನ್ನ ಕರೆಯಲಾಗಿದೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ರಾಜ್ಯವನ್ನ ಕೊಳ್ಳೆ ಹೊಡೆದಿವೆ. ಮೂರು ಪಕ್ಷಗಳನ್ನ ಹೊರೆತು ಪಡಿಸಿ ಬೇರೆ ಯಾವುದೇ ಪಕ್ಷವನ್ನ ಸಭೆಗೆ ಆಹ್ವಾನಿಸಿಲ್ಲ. ಇದು ಅಪರಿಪೂರ್ಣ ಸಭೆ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ. ನಮ್ಮ ರಾಜ್ಯದ ವಾಸ್ತವ ಪರಿಸ್ಥಿತಿಯನ್ನ ಮನವರಿಕೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ವೈಫಲ್ಯವನ್ನ ಮರೆ ಮಾಚಲು ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ ಎಂದು ಹರಿಹಾಯ್ದರು.
Key words: cavery dispute- farmer organizations –protest- Mysore