ಬೆಂಗಳೂರು,ಮಾರ್ಚ್,27,2021(www.justkannada.in): ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿ.ಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ. ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಜೆಡಿಎಸ್ ಅನುಮಾನ ವ್ಯಕ್ತಪಡಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿ.ಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ. ಪ್ರಕರಣದಲ್ಲಿ @DKShivakumar ಮತ್ತು @siddaramaiah ಹೆಸರು ಕೇಳಿಬರುವ ಮೂಲಕ ಪ್ರಕರಣ ಈಗ ‘ಹನಿಟ್ರ್ಯಾಪ್’ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ರಾಷ್ಟ್ರದ ಎದುರು ನಾಚಿಕೆ ಪಡುವ ಸ್ಥಿತಿಯಲ್ಲಿ ರಾಜ್ಯ ನಿಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ರಾತ್ರಿ ಒಂದು ಆಡಿಯೊ ಬಿಡುಗಡೆಯಾಗುವುದು, ಬೆಳಗ್ಗೆ ಅದಕ್ಕೊಂದು ಸ್ಪಷ್ಟನೆಯ ವಿಡಿಯೊ ಬಿಡುಗಡೆಯಾಗುವುದು… ಇವೆಲ್ಲವನ್ನೂ ಗಮನಿಸುತ್ತಿದ್ದರೆ ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ನೆಪದಲ್ಲಿ, ಆಕೆಯನ್ನು ಮುಂದಿಟ್ಟುಕೊಂಡು ಯಾರೋ ಆಟವಾಡುತ್ತಿರುವುದು ಸ್ಪಷ್ಟವಾಗುತ್ತಲಿದೆ ಎಂದು ಜೆಡಿಎಸ್ ಟ್ವಿಟ್ಟರ್ ನಲ್ಲಿ ಅನುಮಾನ ವ್ಯಕ್ತಪಡಿಸಿದೆ.
ಯಾವುದೇ ರಾಜಕೀಯ ಒತ್ತಡಗಳನ್ನೂ ಲೆಕ್ಕಿಸದೇ ತನಿಖೆ ನಡೆಸಿ ಅಸಲಿ ಸತ್ಯ ಬಯಲಿಗೆಳೆಯಬೇಕು.
ಹಾಗೆಯೇ ಪ್ರಕರಣವನ್ನು ಅದರಪಾಡಿಗೆ ಬಿಟ್ಟು, ಆಗುವ ಬೆಳವಣಿಗೆಯನ್ನು ರಾಷ್ಟ್ರ ನೋಡಿ ಮನರಂಜನೆ ಪಡೆಯುವಂತೆ ಮಾಡುವುದು ರಾಜ್ಯಕ್ಕೆ, ನಮ್ಮ ಪೊಲೀಸರಿಗೆ ಮಾಡುವ ಅತಿ ದೊಡ್ಡ ಅಪಮಾನವಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರು ದಿಟ್ಟತನ ಮೆರೆಯುವುದು ಅತ್ಯಗತ್ಯ. ಯಾವುದೇ ರಾಜಕೀಯ ಒತ್ತಡಗಳನ್ನೂ ಲೆಕ್ಕಿಸದೇ ತನಿಖೆ ನಡೆಸಿ ಅಸಲಿ ಸತ್ಯ ಬಯಲಿಗೆಳೆಯಬೇಕು.
ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪ್ ಆಗಿದೆಯೋ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬುದನ್ನು ಲೆಕ್ಕಿಸದೇ ಅಸಲಿ ಸಂಗತಿಯನ್ನು ಪೊಲೀಸರು ಹೊರ ತರಬೇಕು. ರಾಜ್ಯದ ಪೊಲೀಸರ ಕರ್ತವ್ಯ ನಿಷ್ಠೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರಿದೆ. ಅದರ ಪ್ರದರ್ಶನಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂದು ಜೆಡಿಎಸ್ ಹೇಳಿದೆ.
ಲೈಂಗಿಕ ಪ್ರಕರಣವೊಂದರ ವರದಿಗಳು ನಿತ್ಯ ಪ್ರಕಟವಾಗುತ್ತಿದ್ದರೆ, ಅದರಿಂದ ಕುಟುಂಬಗಳು ಮತ್ತು ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ನಾವು ಚಿಂತಿಸಬೇಕಿದೆ. ಇದಕ್ಕೆ ಅಂತ್ಯ ಹಾಡಬೇಕಿದ್ದರೆ ಸೂಕ್ತ ತನಿಖೆಯೊಂದೇ ದಾರಿ. ಇಲ್ಲವಾದರೆ, ಈ ಪ್ರಕರಣದ ಬೆಳವಣಿಗೆಗಳು ಮತ್ತಷ್ಟು ವಿಸ್ತಾರವಾಗುತ್ತ ನಾಗರಿಕ ಸಮಾಜ ನಾಚಿಕೆಯಲ್ಲಿ ದಿನ ಕಳೆಯಬೇಕಾಗುತ್ತದೆ ಎಂದು ಜೆಡಿಎಸ್ ಕಳವಳ ವ್ಯಕ್ತಪಡಿಸಿದೆ.
Key words: CD –case- jds-tweet-Sexual exploitation