ಬೆಂಗಳೂರು,ಅಕ್ಟೋಬರ್,24,2020(www.justkannada.in): ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಿಸಲು ಒತ್ತು ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಈ ಬಾರಿಯ ದೀಪಾವಳಿಯನ್ನು ಕಾಮಧೇನು(ಗೋಮಯ) ದೀಪಾವಳಿಯನ್ನಾಗಿಸಲು ಕರೆ ನೀಡಿದ್ದಾರೆ. ರಾಸಾಯನಿಕಯುಕ್ತ ಹಣತೆ,ಅಪಾಯಕಾರಿ ಪಟಾಕಿಗಳನ್ನು ಬಳಸುವುದನ್ನು ಬಿಟ್ಟು ಮನಸಿಗೆ ಮುದ ನೀಡುವ ಹಾನಿಕಾರಕವಲ್ಲದ ಗೋಮಯ ದೀಪಗಳನ್ನು ಬಳಸಲು ಕರೆ ನೀಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೈತರ ಸ್ವಾವಲಂಬನೆ ಹಾಗೂ ಆದಾಯ ದ್ವಿಗುಣ ಕಾರ್ಯಯೋಜನೆಯನ್ನು ಆತ್ಮ ನಿರ್ಭರ್ ಭಾರತದ ಸಂಕಲ್ಪವನ್ನು ಸಾಕಾರ ಗೊಳಿಸಲು ಕೇಂದ್ರ ಪಶು ಸಂಗೋಪನಾ ಸಚಿವಾಲಯದ ರಾಷ್ಟ್ರೀಯ ಕಾಮಧೇನು ಆಯೋಗದಿಂದ ಪ್ರಾಯೋಜಿತವಾದ ಸಗಣಿಯಿಂದ ತಯಾರಿಸಿದ ಗೋಮಯ ಹಣತೆಯನ್ನು ಈ ದೀಪಾವಳಿಯ ಸಂದರ್ಭದಲ್ಲಿ ದೇಶದಾದ್ಯಂತ ಉರಿಸುವ ಯೋಜನೆ ರೂಪಿಸಿದೆ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ,ರಾಷ್ಟ್ರೋತ್ಥಾನ ಗೋಶಾಲೆ, ಗೋಸೇವಾ ಗತಿವಿಧಿ ಹಾಗೂ ಪ್ರಾಣಿ ಕಲ್ಯಾಣ ಮಂಡಳಿ ಈ ಬಾರಿಯ ದೀಪಾವಳಿಯನ್ನು ಪರಿಸರ ಸ್ನೇಹಿ ಗೋಮಯ ದೀಪಗಳಿಂದ ಆಚರಿಸಬೇಕೆಂದು ಯೋಜನೆ ರೂಪಿಸಿದ್ದು, ದೇಶದಲ್ಲಿ 33 ಕೋಟಿ ದೀಪಗಳನ್ನು ರಾಜ್ಯದಲ್ಲಿ 3ಕೋಟಿ ಗೋಮಯ ದೀಪಗಳನ್ನು ಬಳಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.
ಈ ಗೋಮಯ ದೀಪಗಳನ್ನು ಬಳಸುವುದರಿಂದ ರೈತರ ಬೆನ್ನೆಲುಬಾದ ಭಾರತೀಯ ದೇಶಿ ಗೋತಳಿಯ ಉಳಿವಿಗೆ ಪ್ರಯತ್ನ ಮಾಡುವುದರ ಜೊತೆಗೆ ಆರೋಗ್ಯದ ಹಿತದೃಷ್ಟಿಯಿಂದಲೂ ಉತ್ತಮವಾಗಿದೆ. ಅಲ್ಲದೇ ಇದರಿಂದ ದೇಶೀಯ ದೀಪಗಳಿಗೆ ಉತ್ತೇಜನ ತಯಾರಿಕರಿಗೆ ಪ್ರೋತ್ಸಾಹ ದೊರೆಯುವಂತಾಗುತ್ತದೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.
Key words: Celebrate -Eco-friendly- Dipavali- Agriculture Minister -BC Patil