ಬೆಂಗಳೂರು, ಅಕ್ಟೋಬರ್ 12, 2022 (www.justkannada.in): ದೀಪಾವಳಿ ಇದೇ ತಿಂಗಳು 24 ರಿಂದ 26ರವರೆಗೆ ಆಚರಿಸಲಾಗುತ್ತದೆ. ಈ ಬಾರಿ ಹೆಚ್ಚು ಹೆಚ್ಚು ಜನರು, ಗಿಡವಾಗಿ ಬೆಳೆಯುವಂತಹ ನೆಡಬಲ್ಲ ಪರಿಸರ-ಸ್ನೇಹಿ ಪಟಾಕಿಗಳನ್ನು ಖರೀದಿಸಲು ಉತ್ಸಾಹ ತೋರುತ್ತಿದ್ದಾರೆ.
ನೆಡಬಲ್ಲಂತಹ ಪಟಾಕಿ ಅಥವಾ ಬಾಂಬ್, ಸಾಮಾನ್ಯವಾಗಿ ಲಭ್ಯವಾಗುವಂತಹ ಹಾನಿಕಾರಕ ಪಟಾಕಿಗಳಿಗಿಂತ ಬಹಳ ಭಿನ್ನವಾಗಿದೆ. ಈ ಪರಿಸರ-ಸ್ನೇಹಿ ಪಟಾಕಿಗಳನ್ನು ಮಣ್ಣಿನಲ್ಲಿ ನೆಡಬಹುದು.
ಬೆಂಗಳೂರು ಮೂಲದ ನವೋದ್ಯಮ ‘ಸೀಡ್ ಪೇಪರ್ ಇಂಡಿಯಾ’ದ ಮಾಲೀಕರಾದ ರೋಶನ್ ರೇ ಅವರು ಇಂತಹ ಅಪರೂಪದ ಪಟಾಕಿಗಳನ್ನು ತಯಾರಿಸಿದ್ದು, ಈ ಬಾರಿ ಜನರು ಅದರಲ್ಲಿಯೂ ವಿಶೇಷವಾಗಿ ಯುವಜನರು ಹೆಚ್ಚಾಗಿ ಈ ಪಟಾಕಿಗಳನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು. ಈ ವಿಶೇಷ ಪಟಾಕಿಗಳು, ಮೇರಿಗೊಲ್ಡ್ (ಚೆಂಡು ಹೂ) ಬೀಜಗಳಿರುವಂತಹ ನೆಡಬಲ್ಲಂತಹ ರಾಕೆಟ್ ಗಳು, ಟೊಮೆಟೊ ಸಸಿಯಾಗಿ ಬೆಳೆಯುವಂತಹ ಲಕ್ಷ್ಮಿ ಪಟಾಕಿ, ಚಿಯಾ ಬೀಜಗಳಿರುವ ಚಕ್ರಗಳು, ತುಳಸಿ ಬೀಜಗಳಿರುವ ಪಟಾಕಿಗಳು, ಇತ್ಯಾದಿ ಒಳಗೊಂಡಂತೆ ವಿವಿಧ ವಿಧಗಳಲ್ಲಿ ಲಭ್ಯವಿದೆ. ಈ ಪಟಾಕಿಗಳನ್ನು ಮರುಬಳಕೆ ಮಾಡಿರುವ ಕಾಗದ ಹಾಗೂ ಸಸಿಗಳ ಬೀಜಗಳಿಂದ ತಯಾರಿಸಲ್ಪಟ್ಟಿವೆ.
“ಇಷ್ಟೊಂದು ಜನರು ಈ ಪಟಾಕಿಗಳನ್ನು ಖರೀದಿಸಲು ಆಸಕ್ತಿ ತೋರುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಆದರೆ ಈವರೆಗೆ ಅನೇಕ ಕಾಲೇಜು ವಿದ್ಯಾರ್ಥಿಗಳು ಈ ಪಟಾಕಿಗಳನ್ನು ಖರೀದಿಸುತ್ತಿದ್ದು, ಜೊತೆಗೆ ತಮ್ಮ ಸ್ನೇಹಿತರು ಹಾಗೂ ಇತರೆ ಸಂಬಂಧಿಕರಿಗೂ ಉಡುಗೊರೆಯಾಗಿ ನೀಡುತ್ತಿದ್ದಾರೆ,” ಎಂದು ರೋಶನ್ ತಿಳಿಸಿದರು.
ಸಾಂಪ್ರದಾಯಿತ ಪಟಾಕಿಗಳಂತಲ್ಲದೆ, ಈ ಪಟಾಕಿಗಳನ್ನು ಆನ್ ಲೈನ್ ಮೂಲಕವೂ ಖರೀದಿಸಬಹುದು ಅಥವಾ ಕೋರಿಯರ್ ಮೂಲಕವೂ ಸಹ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು. “ಈ ಪಟಾಕಿಗಳಲ್ಲಿ ಯಾವುದೇ ರೀತಿಯ ಹಾನಿಕಾರ ರಾಸಾಯನಿಕ ಪದಾರ್ಥಗಳು ಅಥವಾ ಗನ್ ಪೌಡರ್ ಇಲ್ಲ. ಹಾಗಾಗಿ ಇದನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಮೇಲಾಗಿ ಈ ಪಟಾಕಿಗಳನ್ನು ಮಾರಾಟ ಮಾಡಲು ಪರವಾನಗಿಯೂ ಬೇಕಿಲ್ಲ,” ಎಂದು ರೋಶನ್ ರೇ ವಿವರಿಸಿದರು.
ಈ ಪರಿಸರ-ಸ್ನೇಹಿ ಪಟಾಕಿಗಳಿಂದ ಗಾಯಗಳಾಗುವ ಗಂಡಾಂತರವೂ ಇಲ್ಲ. “ನನಗೆ ದೀಪಾವಳಿ ಆಚರಣೆಯ ಚಿತ್ರಣವನ್ನೇ ಬದಲಾಯಿಸುವ ಆಸೆ ಇದೆ. ಏಕೆಂದರೆ ದೀಪಾವಳಿ ಎಂದರೆ ಸಾಮಾನ್ಯವಾಗಿ ದೊಡ್ಡ ಪ್ರಮಾಣದ ಶಬ್ದ ಹಾಗೂ ಸ್ಫೋಟಗಳೆಂದೇ ಜನರು ಭಾವಿಸುತ್ತಾರೆ. ನಾವು #dontburstgrow,” ಎಂಬ ಹ್ಯಾಶ್ ಟ್ಯಾಗ್ ಒಂದನ್ನೂ ಸಹ ಆರಂಭಿಸಿದ್ದೇವೆ,” ಎಂದರು.
“ದೇಶದ ಒಟ್ಟು ಪಟಾಕಿ ಉತ್ಪಾದನೆಯ ಪೈಕಿ ಶೇ.೯೦ರಷ್ಟು ಪಟಾಕಿಗಳನ್ನು ಉತ್ಪಾದಿಸುವ ಶಿವಕಾಶಿಗೆ ನಾನು ಒಮ್ಮೆ ಭೇಟಿ ನೀಡಿದೆ. ಅಲ್ಲಿ ಪಟಾಕಿ ತಯಾರಕರೊಂದಿಗೆ ಇಂತಹ ಪರಿಸರ-ಸ್ನೇಹಿ ಪಟಾಕಿಗಳ ತಯಾರಿಕೆಯ ಕುರಿತು ಚರ್ಚಿಸಿದೆ. ಆದರೆ ಬಹುತೇಕ ಅಲ್ಲಿ ಯಾರಿಗೂ ಇದರಲ್ಲಿ ಆಸಕ್ತಿ ಕಂಡು ಬರಲಿಲ್ಲ. ಏಕೆಂದರೆ ಸಾಂಪ್ರದಾಯಿಕ ಪಟಾಕಿಗಳ ತಯಾರಿಕೆಯ ಹೋಲಿಕೆಯಲ್ಲಿ ಇಂತಹ ಪರಿಸರ-ಸ್ನೇಹಿ ಪಟಾಕಿಗಳಿಂದ ಅವರಿಗೆ ಬರುವ ಲಾಭ ಬಹಳ ಕಡಿಮೆ,” ಎಂದು ವಿವರಿಸಿದರು.
ಕಾವ್ಯ ಸಿಂಗ್ ಎಂಬ ಹೆಸರಿನ ವಿದ್ಯಾರ್ಥಿನಿಯೊಬ್ಬರು ಈ ಬಾರಿ ದೀಪಾವಳಿಗೆ ಈ ಪರಿಸರ-ಸ್ನೇಹಿ ಪಟಾಕಿಗಳನ್ನು ಖರೀದಿಸಿದ್ದು, “ನಾನು ಚಿಕ್ಕಂದಿನಿಂದಲೂ ಎಂದಿಗೂ ಪಟಾಕಿಗಳನ್ನೇ ಸುಟ್ಟಿಲ್ಲ. ಆದರೆ ಈ ಬಾರಿ ದೀಪಾವಳಿ ಹಬ್ಬ ನನ್ನ ಪಾಲಿಗೆ ವಿಶೇಷವಾಗಿರಲಿದೆ. ಜೊತೆಗೆ ನಮ್ಮ ಕುಟುಂಬದ ಸದಸ್ಯರಿಗೂ ಸಹ ಇದೊಂದು ರೀತಿಯಲ್ಲಿ ಯೋಜನೆಯಾಗಲಿದೆ. ಏಕೆಂದರೆ ಹಬ್ಬ ಮುಗಿದ ನಂತರವೂ ಸಹ ಸಸಿಗಳನ್ನು ನೋಡಿಕೊಳ್ಳಬೇಕಾಗುತ್ತದೆ,” ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Celebrate – eco-friendly -Diwali -this time.