ಬೆಂಗಳೂರು, ಜನವರಿ 15, 2023 (www.justkannada.in): ಮಕರ ಸಂಕ್ರಾಂತಿ ಹಬ್ಬವನ್ನು ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನತೆ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಎಲ್ಲರ ಮನೆ ಮುಂದೆ ಚಂದದ ರಂಗೋಲಿ ಕಣ್ಮನ ಸೆಳೆಯುತ್ತಿದೆ.
ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಸಂಭ್ರಮ, ಸಂತಸ ಎಲ್ಲೆಡೆ ಮನೆ ಮಾಡಿತ್ತು. ಮಹಿಳೆಯರು ಹಾಗೂ ಮಕ್ಕಳು ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಹಬ್ಬಕ್ಕಾಗಿ ಪೊಂಗಲ್ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸದರು. ಬಣ್ಣದ ಸಕ್ಕರೆ ಅಚ್ಚು, ಎಳ್ಳು, ಬೆಲ್ಲ ಮಿಶ್ರಣ ಮಾಡಿದ ಪಟ್ಟಣಗಳ ಚೀಲವನ್ನು ಕೈಯಲ್ಲಿ ಹಿಡಿದ ಚಿಣ್ಣರು, ಯುವತಿಯರು ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಎಳ್ಳು, ಬೆಲ್ಲ ಬೀರುವ ದೃಶ್ಯ ಸಾಮಾನ್ಯವಾಗಿತ್ತು.
ಹಬ್ಬದ ಅಂಗವಾಗಿ ನಗರದ ಎಲ್ಲ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.