ಬೆಂಗಳೂರು,ಜೂನ್,15,2023(www.justkannada.in): ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರದ ಬಳಿ ಪುಕ್ಸಟ್ಟೆಯಾಗಿ ಅಕ್ಕಿ ಕೇಳುತ್ತಿಲ್ಲ. ದುಡ್ಡು ಕೊಡುತ್ತಿದ್ದೇವೆ. ಇವರು ನಮಗೆ ಉಪಕಾರ ಮಾಡಿದ ರೀತಿ ಆಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಿ.ಟಿ.ರವಿ,ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದ ಜೊತೆ ಮಾತನಾಡಿ ರೂಢಿ ಇಲ್ಲ. ಈ ಪ್ರಕ್ರಿಯೆಯ ಬಗ್ಗೆ ಅವರಿಗೆ ಮಾಹಿತಿ ಇಲ್ಲ . ಆಹಾರ ಧಾನ್ಯವನ್ನು ಪಡೆದುಕೊಳ್ಳಲು ಪ್ರಕ್ರಿಯೆ ಇವೆ. ಯಾವುದೇ ರಾಜ್ಯ ಮೊದಲು ಎಫ್ ಸಿಐಗೆ ಹೋಗಬೇಕು. ಅವರು ಕೊಡಲ್ಲ ಅಂದ್ರೆ ಖಾಸಗಿಯಾಗಿ ಹೋಗಬೇಕು. ಅಶೋಕ್, ಸಿ.ಟಿ. ರವಿ ಅಕ್ಕಿ ಕೊಡದ ಬಗ್ಗೆ ವಿವರಿಸಲಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಬಗ್ಗೆ ಚರ್ಚೆ ಯಾಗಲಿದೆ ನಾವು ವಾಗ್ದಾನ ಮಾಡಿದ್ದೇವೆ. ಅದರಂತೆ ನಡೆದುಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರದಿಂದ ನಾವು ಹಣ ಕೇಳ್ತಿಲ್ಲ: ಅನ್ನ ಭಾಗ್ಯಕ್ಕೆ ಅಕ್ಕಿ ಕೊಡಿ ಎಂದಿದ್ದೇವೆ ಅಷ್ಟೇ- ಇಂಧನ ಸಚಿವ ಕೆ.ಜೆ ಜಾರ್ಜ್
ಹಾಗೆಯೇ ಇಂಧನ ಸಚಿವ ಕೆ.ಜೆ ಜಾರ್ಜ್ ಮಾತನಾಡಿ, ಸಿಎಂ ಈಗಾಗಲೇ ರಿಯಾಕ್ಷನ್ ಕೊಟ್ಟಿದ್ದಾರೆ. ಆ ಹೇಳಿಕೆಗೆ ನಾನು ಧ್ವನಿಗೂಡಿಸುತ್ತೇನೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾರು ಕಷ್ಟದಲ್ಲಿ ಇದಾರೆ..? ಯಾರು ಸಾಮಾನ್ಯ ಜನರಿದ್ದಾರೆ..? ಸರ್ಕಾರದ ಜೊತೆ ಸೇರಿ ಅವರಿಗೆ ಸಹಾಯ ಮಾಡಬೇಕು. ಆದರೆ ಕೇಂದ್ರ ಸರ್ಕಾರ, ಬಿಜೆಪಿ ಹಿಂದೆ ಸರಿಯುತ್ತಿದೆ. ಐದು ಗ್ಯಾರಂಟಿ ಸಾಮಾನ್ಯ ಜನರಿಗೆ ಕೊಟ್ಟಿದ್ದೇವೆ. ಇದನ್ನು ವಿರೋಧ ಮಾಡಿದ್ರೆ ಜನರ ವಿರೋಧ ಎಂದರ್ಥ. ನಾವೇನು ಅಕ್ಕಿ ಫ್ರೀ ಕೊಡಿ ಅಂತ ಕೇಳ್ತಿಲ್ಲ. ಹಣ ಕೊಡ್ತೇವೆ ಅಕ್ಕಿ ಕೊಡಿ ಅಂತ ಕೇಳ್ತಿದ್ದೇವೆ. ಕೇಂದ್ರ ಸರ್ಕಾರದಿಂದ ನಾವು ಹಣ ಕೇಳ್ತಿಲ್ಲ. ಅನ್ನ ಭಾಗ್ಯಕ್ಕೆ ಅಕ್ಕಿ ಕೊಡಿ ಎಂದಿದ್ದೇವೆ ಅಷ್ಟೇ. ಅದನ್ನೂ ಕೇಂದ್ರ ಸರ್ಕಾರ ಕೊಡ್ತಿಲ್ಲ ಎಂದರು.
Key words: Center – rice -money – Minister -Priyank Kharge.