ಬೆಂಗಳೂರು,ಫೆಬ್ರವರಿ,1,2022(www.justkannada.in): ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಬಿಎಸ್ ಯಡಿಯೂರಪ್ಪ, ಜನಪರವಾದ, ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದೆ. ಗ್ರಾಮೀಣ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಇದು ಪೂರಕ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತಾರ್ಹ ಎಂದರು.
ಆಯವ್ಯಯ ಆರ್ಥಿಕ ಹಿಂಜರಿತ ಸರಿಪಡಿಸುವ ದೃಷ್ಟಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿ ಗುರಿ ಹೊಂದಿದೆ. ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿ, 2023 ರ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಿದ್ದು ಸಹ ಉತ್ತಮವಾಗಿದೆ. ಒಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದಿದ್ದಾರೆ.
Key words: central-budget-former CM-BS yeddyurappa