ದಕ್ಷಿಣ ಭಾರತ ರಾಜ್ಯಗಳ ಆದಾಯ ಕಸಿದು ಉತ್ತರ ರಾಜ್ಯಗಳಿಗೆ ಹಂಚುವ ತಾರತಮ್ಯ ನೀತಿ ಮುಂದುವರೆದಿದೆ- ಎಚ್.ಎ ವೆಂಕಟೇಶ್ ಟೀಕೆ

ಮೈಸೂರು,ಜುಲೈ,23,2024 (www.justkannada.in): ಕೇಂದ್ರ ಸರ್ಕಾರವು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ದಕ್ಷಿಣ ಭಾರತದ ರಾಜ್ಯಗಳ ಆದಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಸಿದು, ಉತ್ತರದ ರಾಜ್ಯಗಳಿಗೆ ಹಂಚುವ ತನ್ನ ತಾರತಮ್ಯದ ನೀತಿಯನ್ನು ಈ ಬಾರಿಯೂ ಮುಂದುವರೆಸಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಟೀಕಿಸಿದ್ದಾರೆ.

ಕೇಂದ್ರ ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಹೆಚ್.ಎ ವೆಂಕಟೇಶ್, ನಮ್ಮ ರಾಜ್ಯಕ್ಕೆ ಬರಬೇಕಾಗಿದ್ದ ಹಕ್ಕಿನ ಜಿಎಸ್‌ಟಿ ಹಣ ಮತ್ತು ಇನ್ನಿತರ ಆದಾಯದ ನ್ಯಾಯಯುತ ಪಾಲು, ಈ ಬಾರಿಯ ಬಜೆಟ್‌ ನಲ್ಲಿಯೂ ಹೊಸ ಘೋಷಣೆಗಳ ಮೂಲಕ ನಮಗೆ ದಕ್ಕಿಲ್ಲ. ಮೇಕೆದಾಟು, ಮಹದಾಯಿಗೆ ನ್ಯಾಯ ಸಿಕ್ಕಿಲ್ಲ. ರಾಜ್ಯಕ್ಕೆ ಹೊಸ ಐಐಟಿ, ಐಐಎಂಎಸ್ ಕ್ಯಾಂಪಸ್ ಮಂಜೂರಾತಿಯೂ ಆಗಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ರಾಜ್ಯವು ದೇಶದ ಜಿಎಸ್‌ ಟಿಗೆ ಅತ್ಯಧಿಕ ಪಾಲು ನೀಡುತ್ತಾ ಬಂದಿದೆ. ಆದರೆ ನಮಗೆ ಈ ಬಾರಿಯ ಬಜೆಟ್‌ನಲ್ಲಿ ಎನ್‌ ಡಿಎ ಸರ್ಕಾರ ಯಾವುದೇ ವಿಶೇಷ ಯೋಜನೆ ಪ್ರಕಟಿಸದೇ ಮಲತಾಯಿ ಧೋರಣೆ ತೋರ್ಪಡಿಸಿದೆ. ಆಂಧ್ರ ಪ್ರದೇಶ ಹೊರತುಪಡಿಸಿ, ಉಳಿದೆಲ್ಲಾ ದಕ್ಷಿಣದ ರಾಜ್ಯಗಳನ್ನೂ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಮೋದಿ ಸರ್ಕಾರಕ್ಕೆ ಬೆಂಬಲ ನೀಡಿರುವ ಬಿಹಾರದ ಜೆಡಿಯು ಮತ್ತು ಆಂಧ್ರದ ಟಿಡಿಪಿ ನಾಯಕರನ್ನು ಓಲೈಸಲು, ಈ ಎರಡು ರಾಜ್ಯಗಳಿಗೆ ಹೊಸ ಯೋಜನೆಗಳ ಮಹಾಪೂರವನ್ನೇ ಹರಿಸಿರುವ ಈ ಬಜೆಟ್, ಬಿಜೆಪಿ ಆಡಳಿತವಿರುವ ರಾಜ್ಯಗಳನ್ನೂ ಕಡೆಗಣಿಸಿರುವುದು ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಮತ್ತು ಶಿಕ್ಷಣವನ್ನು ಬಹಳವಾಗಿ ನಿರ್ಲಕ್ಷಿಸಲಾಗಿದೆ. ಕಳೆದ ಬಾರಿ ಕೃಷಿಗೆ ಶೇ. 3.20ಯಷ್ಟು ಮಾತ್ರ ಒತ್ತು ನೀಡಲಾಗಿತ್ತು, ಈ ಬಾರಿ ಇದು ಶೇ.3.15ಕ್ಕೆ ಇಳಿದಿರುವುದು ದುರಂತ, ದೇಶದ ರೈತರ ಹಿತ ಮತ್ತು ಜನತೆಯ ಆಹಾರ ಭದ್ರತೆ ಕುರಿತು ಎನ್‌ ಡಿಎ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ.  ದೊಡ್ಡ ಉದ್ಯಮಿಗಳಿಗೆ ನೆರವಾಗುವ ಮತ್ತು ಸಣ್ಣ ಉದ್ದಿಮೆದಾರರು ಮತ್ತು ಸಾಮಾನ್ಯರಿಗೆ ಯಾವ ಅನುಕೂಲವೂ ಇಲ್ಲದ ಈ ಬಜೆಟ್‌ನಲ್ಲಿ ಒಂದೇ ಒಂದು ಪ್ರಶಂಸಾರ್ಹ ಅಂಶವೆಂದರೆ ಅದು- ಚುನಾವಣೆಗೂ ಮುನ್ನಾ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಯುವಕರಿಗೆ ಉದ್ಯೋಗ ನೀಡುವ ಯುವ ನ್ಯಾಯ ಯೋಜನೆಯ ವಿವರಗಳನ್ನು ಕದ್ದು ಬಜೆಟ್‌ ನಲ್ಲಿ ಅಳವಡಿಸಿಕೊಂಡಿರುವುದು. ಈ ಮೂಲಕವಾದರೂ ಯುವಕರಿಗೆ ಕೊನೆಗೂ ಉದ್ಯೋಗ ನೀಡಬೇಕೆಂಬ ಒತ್ತಡಕ್ಕೆ ಮೋದಿ ಸರ್ಕಾರ ಮಣಿದಿದೆ ಎಂದು ಎಚ್.ಎ ವೆಂಕಟೇಶ್ ತಿಳಿಸಿದ್ದಾರೆ.

Key words: Central budget,  KPCC, Spokesman, H.A Venkatesh