ಬೆಂಗಳೂರು, ಆಗಸ್ಟ್ 29,2020(www.justkannada.in): ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ನಷ್ಟ ತುಂಬಿಕೊಡುವ ಬದ್ಧತೆಯಿಂದ ಹಿಂದೆ ಸರಿದಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಮೇಲೆ ಗದಾಪ್ರಹಾರ ಮಾಡುವ ಮೂಲಕ ಹೊಣೆಗೇಡಿತನ ಪ್ರದರ್ಶಿಸಿರುವುದು ತೀವ್ರ ಖಂಡನೀಯ ಎಂದು ಕೇಂದ್ರ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ ಕುಮಾರಸ್ವಾಮಿ, ಕೊರೋನಾ ಸಂಕಷ್ಟ ‘ದೇವರ ಅಸಮಾನ್ಯ ಆಟ’ ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಯ ರಾಜ್ಯಗಳ ಬಹುದೊಡ್ಡ ನಂಬಿಕೆಗೆ ಕೊಡಲಿಪೆಟ್ಟು ಕೊಟ್ಟಿದೆ. ಸುಲಭದ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಿ. ಪಡೆದ ಸಾಲವನ್ನು ರಾಜ್ಯಗಳೇ ತೀರಿಸಿ ಎನ್ನುವ ಆಯ್ಕೆ ಮುಂದಿಟ್ಟು ರಾಜ್ಯಗಳ ಆರ್ಥಿಕತೆಗೆ ಕೇಂದ್ರ ಸರ್ಕಾರ ‘ಕೊಳ್ಳಿ’ ಇಟ್ಟಿದೆ ಎಂದು ಕಿಡಿಕಾರಿದ್ದಾರೆ.
ಹಾಗೆಯೇ ಮತ್ತೊಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಕೇಂದ್ರಕ್ಕೆ ಚಾಟಿ ಬೀಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಯಾವುದೇ ಪ್ರಲೋಭನೆ ಒಡ್ಡುವ ಮೂಲಕ ರಾಜ್ಯಗಳ ಆರ್ಥಿಕತೆಯ ವ್ಯವಸ್ಥೆ ಮೇಲೆ ನಿಯಂತ್ರಣ ಸಾಧಿಸುವ ಕಾನೂನು, ತಿದ್ದುಪಡಿ ಮಸೂದೆಗಳು ಭವಿಷ್ಯದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಅಪಾಯ ಇಲ್ಲದಿಲ್ಲ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಇಂತಹದೊಂದು ಅಪಾಯ ಈಗ ಎದುರಾಗಿದೆ. ಈಗ ಸಂಗ್ರಹವಾಗಿರುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡಲು 97 ಸಾವಿರ ಕೋಟಿ ರೂ ಹಾಗೂ ಆದಾಯ ಕೊರತೆ ಎದುರಾಗಲಿರುವ 2.35 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯಗಳು ಸಾಲ ಪಡೆಯುವ ಆಯ್ಕೆಗಳನ್ನು ಮುಂದಿಟ್ಟಿದೆ ಎಂದು ಟೀಕಿಸಿದರು.
“ಕೊಟ್ಟವ ಕೋಡಂಗಿ; ಇಸ್ಕೊಂಡವ ಈರಭದ್ರ” ಎಂಬಂತೆ ರಾಜ್ಯ ಸರ್ಕಾರಗಳು ಕಣ್ಣುಬಾಯಿ ಬಿಡುತ್ತಿವೆ. ಈಗ ಕೊರೊನಾ ನೆಪ ಮುಂದಿಟ್ಟು ಅನ್ಯಾಯ ಮಾಡಿಬಿಟ್ಟರೆ ರಾಜ್ಯಸರ್ಕಾರಗಳು ಏನು ಮಾಡಬೇಕು? ಕೋವಿಡ್ 19 ಮತ್ತು ನೆರೆಯಿಂದ ಬಳಲಿರುವ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿವೆ.
ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳು…
ತಾಳ ತಪ್ಪಿದ ಕೇಂದ್ರಸರ್ಕಾರದ ದಿಕ್ಕೆಟ್ಟ ಅರ್ಥವ್ಯವಸ್ಥೆ ಮತ್ತು ಮುನ್ನೋಟದ ಅಂದಾಜು ಗ್ರಹಿಸದ ವೈಫಲ್ಯದ ಫಲವಾಗಿ ರಾಜ್ಯ ಸರ್ಕಾರಗಳು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪರಿಸ್ಥಿತಿಗೆ ಸಿಲುಕಿ ನಲುಗುತ್ತಿವೆ. ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ ಆರ್.ಬಿ ಐ ನಿಂದ ಸಾಲ ಪಡೆದು ರಾಜ್ಯಗಳಿಗೆ ನಷ್ಟ ಪರಿಹಾರ ತುಂಬಿ ಕೊಡಲಿ ಎಂದು ಕೇಂದ್ರ ಸರ್ಕಾರಕ್ಕೆ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
Key words: central government – economy – states-former cm- HD Kumaraswamy – GST- issue