ಬೆಂಗಳೂರು, ಜುಲೈ 21, 2019 (www.justkannada.in): ನಾಳೆಯೂ ವಿಶ್ವಾಸ ಮತಯಾಚನೆ ಮಾಡದೇ ಕಲಾಪವನ್ನು ಮುಂದೂಡಿದಲ್ಲಿ ಕೇಂದ್ರ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ.
ದೋಸ್ತಿ ಸರ್ಕಾರ ಬೀಳಿಸಲು ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಕಮಲ ಪಾಳಯದಿಂದ ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ. ಇನ್ನೊಂದು ಸಲ ಕಲಾಪ ಮುಂದೂಡಿದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಹುಮತ ಸಾಬೀತಿಗೆ ರಾಜ್ಯಪಾಲರು ಎರಡು ಬಾರಿ ಸೂಚನೆ ನೀಡಿದ್ದರೂ ದೋಸ್ತಿ ನಾಯಕರು ತಲೆಕೆಡಿಸಿಕೊಂಡಿಲ್ಲ. ರಾಜ್ಯಪಾಲರು ಕೇಂದ್ರಕ್ಕೆ ಮಧ್ಯಂತರ ವರದಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ವಿಶ್ವಾಸಮತ ಯಾಚನೆ ನಾಟಕಕ್ಕೆ ತೆರೆ ಎಳೆಯಲು ಬಿಜೆಪಿ ಮುಂದಾಗಿದೆ.
ನಾಳೆ ಕೂಡ ಕಲಾಪ ಮುಂದೂಡಿದಲ್ಲಿ ರಾಜ್ಯಪಾಲರಿಂದ ಅಂತಿಮ ವರದಿ ಪಡೆದು ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ಮೈತ್ರಿ ಸರ್ಕಾರ ಅಮಾನತು ಮಾಡುವ ಸಾಧ್ಯತೆ ಇದೆ. ರಾಷ್ಟ್ರಪತಿ ಆಳ್ವಿಕೆ ಹೇರಿ ಯಡಿಯೂರಪ್ಪನವರನ್ನು ರಾಜಭವನಕ್ಕೆ ಕಳುಹಿಸಿ ಸರ್ಕಾರ ರಚನೆಯ ಹಕ್ಕು ಮಂಡಿಸುವ ಚಿಂತನೆ ಇದೆ ಎನ್ನಲಾಗಿದೆ.