ಮೈಸೂರು, ಜುಲೈ 12, 2020 (www.justkannada.in): ಕೇಂದ್ರ ಸರ್ಕಾರವು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಪಠ್ಯಕ್ರಮದಿಂದ ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ, ಗ್ರಾಮೀಣ ವಿಕೇಂದ್ರೀಕೃತ ಆಡಳಿತ ಮತ್ತು ಪೌರ ಜಾಗೃತಿ ಪಠ್ಯಗಳನ್ನು ಕೈಬಿಟ್ಟಿರುವುದು ಅತ್ಯಂತ ಖಂಡನೀಯ ನಡವಳಿಕೆ ಎಂದು ಕೆಪಿಸಿಸಿ ವಕ್ತಾರ, ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್ ದೂರಿದ್ದಾರೆ.
ಇದು ವಿದ್ಯಾರ್ಥಿಗಳಲ್ಲಿ ಕೋಮುವಾದ ಬಿತ್ತಲು ಮತ್ತು ಜಾತ್ಯತೀತತೆಯ ಉತ್ತಮಾಂಶಗಳನ್ನು ಮರೆಮಾಚಲು ನಡೆಸಿರುವ ಹುನ್ನಾರ. ಪಠ್ಯಗಳ ಮೂಲಕ ಉನ್ನತ ವಿಚಾರಗಳನ್ನುಅರಿತು ಮುಂದೆ ಜೀವನದಲ್ಲಿ ಆದರ್ಶ ಮತ್ತು ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳಬಹುದಾಗಿದ್ದ ವಿದ್ಯಾರ್ಥಿ ಸಮುದಾಯವನ್ನು, ಇಂತಹ ಕ್ಷುಲ್ಲಕ ಬದಲಾವಣೆಗಳ ಮೂಲಕ ನಿಯಂತ್ರಿಸಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಈ ಪಕ್ಷದ ನಿಯಂತ್ರಣ ಕೇಂದ್ರವಿರುವ ಆರ್ಎಸ್ಎಸ್ನ ಕೋಮುವಾದಿ- ಏಕಮುಖ ಚಿಂತನೆಯ ಅಜೆಂಡಾಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಲು ಇಂತಹ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ದ್ವೇಷಪೂರಿತ ಮನಸ್ಸು ಮತ್ತು ಧರ್ಮಾಂಧ ವ್ಯಕ್ತಿತ್ವದ ವಿದ್ಯಾರ್ಥಿ ಗುಂಪುಗಳನ್ನು ಸೃಷ್ಟಿಸುವುದು ಬಿಜೆಪಿಗೆ ಸುಲಭದ ವಿಚಾರ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯನ್ನು ತನ್ನ ಕೈ ಗೊಂಬೆ ಮಾಡಿಕೊಂಡು ಬಿಜೆಪಿ ಸರ್ಕಾರವು ಜಾತ್ಯತೀತ ಮೌಲ್ಯಗಳು ಮತ್ತು ಸಮಾನತೆಯ ಆಶಯಗಳನ್ನು ನಾಶಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಸಮಯಾಭಾವದಿಂದ ಪಠ್ಯ ಕೈಬಿಡಲಾಗಿದೆ ಎಂದು ನೀಡಿರುವ ಸಮರ್ಥನೆ ಶುದ್ಧ ಪೊಳ್ಳು. ಇಂತಹ ಸಂಕಷ್ಟದ ಸಮಯವನ್ನೂ ಸಹ ತನ್ನ ವಿದ್ವಂಸಕ ಅಜೆಂಡಾ ಬಿತ್ತಲು ಬಿಜೆಪಿ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ಇದು ಡಾ. ಅಂಬೇಡ್ಕರ್ ಮತ್ತು ಗಾಂಧೀಜಿಯವರ ತತ್ತ್ವ ಮತ್ತು ಚಿಂತನೆಗಳನ್ನು ಮೂಲೆಗುಂಪುಮಾಡುವ ಕೇಂದ್ರದ ಬಿಜೆಪಿ ಸರ್ಕಾರದ ಹತ್ತು ಹಲವು ಹುನ್ನಾರಗಳ ಒಂದು ಯೋಜಿತ ಭಾಗವಷ್ಟೇ.
ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಮೂಲಕ ವಿಷಕಾರುವ ಜಾತಿವಾದಿ ಅಂಶಗಳು ಮತ್ತು ಧರ್ಮಾಂಧತೆ ಬಿತ್ತುತ್ತಿರುವುದನ್ನು ಕೇಂದ್ರ ಸರ್ಕಾರ ಕೂಡಲೇ ನಿಲ್ಲಿಸಬೇಕು. ಇಂತಹ ಐತಿಹಾಸಿಕ ತಪ್ಪುಗಳನ್ನು ಜಾಗೃತ ಭಾರತ ಎಂದಿಗೂ ಕ್ಷಮಿಸುವುದಿಲ್ಲ. ಈ ಘೋರ ಅಪಚಾರಕ್ಕಾಗಿ ನರೇಂದ್ರ ಮೋದಿ ಮತ್ತವರ ತಂಡದವರು ಮುಂದೆ ಬಹುದೊಡ್ಡ ಪಾಠ ಕಲಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.