ಬೆಂಗಳೂರು,ಆಗಸ್ಟ್,28,2020(www.justkannada.in): ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದ ವರದಿಯಲ್ಲೂ ರಾಜ್ಯಕ್ಕೆ ಭೀಕರ ತಾರತಮ್ಯ ಮಾಡಿದೆ. ಈಗ ಜಿ.ಎಸ್.ಟಿ.ಯಲ್ಲೂ ರಾಜ್ಯಕ್ಕೆ ದ್ರೋಹ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದರು.
ಜಿ.ಎಸ್.ಟಿ. ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಕೇಂದ್ರದ ವಿರುದ್ದ ಆಕ್ರೋಶ ಹೊರ ಹಾಕಿರುವ ಮಾಜಿ ಸಿಎಂ ಸಿದ್ಧರಾಮಯ್ಯ, 27-08-2020 ರಂದು ಜಿ.ಎಸ್.ಟಿ ಕೌನ್ಸಿಲ್ ಸಭೆ ನಡೆದಿದೆ. ಈ ಸಭೆಯಲ್ಲಿ ಕೇಂದ್ರ ಸರ್ಕಾರವು ಕೋವಿಡ್-19 ನಿಂದಾಗಿ ಜಿ.ಎಸ್.ಟಿ ಸಂಗ್ರಹದಲ್ಲಿ ರೂ.3 ಲಕ್ಷ ಕೋಟಿಗಳಷ್ಟು ಕೊರತೆಯಾಗಲಿದೆ ಹಾಗೂ ಜಿ.ಎಸ್.ಟಿ. ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆ ರೂ.97,000 ಗಳಷ್ಟಾಗಲಿದೆ. ಇದರಲ್ಲಿ 2.35 ಲಕ್ಷ ಕೋಟಿ ರೂಪಾಯಿಗಳ ಜಿ.ಎಸ್.ಟಿ ಪರಿಹಾರವನ್ನು ಈ ವರ್ಷ ನೀಡಲಾಗುವುದಿಲ್ಲವೆಂದು ತಿಳಿಸಿ ಆರ್.ಬಿ.ಐ. ನಿಂದ ಸಾಲ ಪಡೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಕರ್ನಾಟಕವು ಕೊರೋನಾ ಸಂಕಷ್ಟದ ನಡುವೆಯು ಶೇ.71.61 ರಷ್ಟು ಜಿ.ಎಸ್.ಟಿ. ಸಂಗ್ರಹ ಮಾಡಿದೆ. ಆದರೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ರೂ.13,764 ಕೋಟಿಗಳನ್ನು ಬಾಕಿ ಉಳಿಸಿಕೊಂಡಿದೆ. ಜನವರಿಯವರೆಗೆ ಇದು ರೂ.27,000 ಕೋಟಿಗಳಿಗೆ ಏರಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಕೇಂದ್ರವು 15ನೇ ಹಣಕಾಸು ಆಯೋಗದ ವರದಿಯಲ್ಲೂ ರಾಜ್ಯಕ್ಕೆ ಭೀಕರ ತಾರತಮ್ಯ ಮಾಡಿದೆ. ಈಗ ಜಿ.ಎಸ್.ಟಿ.ಯಲ್ಲೂ ದ್ರೋಹ ಮಾಡುತ್ತಿದೆ ಎಂದು ಹರಿಹಾಯ್ದರು.
ರಾಜ್ಯಗಳ ಅಭಿವೃದ್ಧಿಗೆ ತೊಂದರೆ….
ಕೇಂದ್ರ ಸರ್ಕಾರದ ಈ ನಿಲುವು ಸಂವಿಧಾನ ಬಾಹಿರ. ಸೆಕ್ಷನ್ 18 ರ ಪ್ರಕಾರ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಜಿ.ಎಸ್.ಟಿ. ಪರಿಹಾರವನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಇದನ್ನು ಪಡೆದುಕೊಳ್ಳುವುದು ರಾಜ್ಯಗಳ ಸಂವಿಧಾನಾತ್ಮಕ ಅಧಿಕಾರವಾಗಿದೆ. ಆದರೆ ಕೇಂದ್ರ ಸರ್ಕಾರವು ಒಕ್ಕೂಟ ತತ್ವದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ. ತಾನು ಪರಿಹಾರ ನೀಡುವುದನ್ನು ತಪ್ಪಿಸಿಕೊಂಡು ರಾಜ್ಯಗಳು ಆರ್.ಬಿ.ಐ.ನಿಂದ ಸಾಲ ಪಡೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸುವಂತೆ ಹೇಳುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ಅತ್ಯಂತ ದೊಡ್ಡ ದ್ರೋಹವೆಂದು ಪರಿಗಣಿಸಬೇಕಾಗಿದೆ. ರಾಜ್ಯಗಳಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರದ ಬದಲಾಗಿ ಸಾಲದ ರೂಪದಲ್ಲಿ ಹಣ ಪಡೆದರೆ ಅದನ್ನು ಬಡ್ಡಿ ಸಮೇತ ತೀರಿಸುವ ಜವಾಬ್ದಾರಿ ರಾಜ್ಯಗಳದ್ದಾಗಿರುತ್ತದೆ. ಇದರಿಂದಾಗಿ ರಾಜ್ಯಗಳ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಸಿದ್ಧರಾಮಯ್ಯ ವಿವರಿಸಿದ್ದಾರೆ.
‘ಬನಾನ ರಿಪಬ್ಲಿಕ್’ರೀತಿಯ ಆಡಳಿತ ವ್ಯವಸ್ಥೆಗೆ ದೇಶವನ್ನು ದೂಡಲು ಯತ್ನ…
ಹಾಗೆಯೇ ಕೇಂದ್ರದ ವಿರುದ್ದ ವಾಗ್ದಾಳಿ ಮುಂದುವರೆಸಿದ ಸಿದ್ಧರಾಮಯ್ಯ, ಜಿ.ಎಸ್.ಟಿ. ನಿಯಮಗಳ ಪ್ರಕಾರ ಕೇಂದ್ರ ಸರ್ಕಾರವೇ ಸಾಲ ಪಡೆದು ರಾಜ್ಯಗಳಿಗೆ ಪರಿಹಾರವನ್ನು ನೀಡಬೇಕು. ಸಾಲಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿಯಾಗಬೇಕೆ ಹೊರತು ಅದನ್ನು ಯಾವುದೇ ಕಾರಣಕ್ಕೂ ರಾಜ್ಯಗಳ ಮೇಲೆ ಹೊರಿಸಬಾರದು. ಈಗಾಗಲೇ ಕೇಂದ್ರ ಸರ್ಕಾರವು ತನ್ನ ದುಷ್ಟ ಆರ್ಥಿಕ ನೀತಿಗಳಿಂದಾಗಿ ರಾಜ್ಯಗಳ ತೆರಿಗೆಯ ಅಧಿಕಾರವನ್ನು ನಿಧಾನವಾಗಿ ಕಿತ್ತುಕೊಳ್ಳುತ್ತಿದೆ. ಎ.ಪಿ.ಎಂ.ಸಿ. ಕಾಯ್ದೆಯ ತಿದ್ದುಪಡಿ ಇದಕ್ಕೆ ಅತ್ಯುತ್ತಮ ನಿದರ್ಶನ. ರಾಜ್ಯಗಳ ಆರ್ಥಿಕ ಚೈತನ್ಯವನ್ನು ಸಂಪೂರ್ಣ ನಾಶ ಮಾಡಿ ದೇಶವನ್ನು ‘ಬನಾನ ರಿಪಬ್ಲಿಕ್’ ರೀತಿಯ ಆಡಳಿತ ವ್ಯವಸ್ಥೆಗೆ ದೇಶವನ್ನು ದೂಡಲು ಯತ್ನಿಸುತ್ತಿದೆ. ಕೇಂದ್ರ-ರಾಜ್ಯಗಳ ನಡುವೆ ಸಹಕಾರ ತತ್ವದ ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆ ಇರಬೇಕಾದ ಬದಲಿಗೆ ಸರ್ವಾಧಿಕಾರಿ ಪ್ರವೃತ್ತಿಯ ಕಡೆಗೆ ದೇಶವನ್ನು ದೂಡಲಾಗುತ್ತಿದೆ ಎಂದು ಗುಡುಗಿದರು.
ಪೆಟ್ರೋಲ್, ಡೀಸೆಲ್ ದರ ರೂ.100/- ಗಳ ಹತ್ತಿರಕ್ಕೆ ತಲುಪುತ್ತಿದೆ. ಪೆಟ್ರೋಲ್, ಡೀಸೆಲ್‍ಗಳ ಮೇಲೆ ಕೇಂದ್ರವು ಅಮಾನವೀಯ ರೀತಿಯಲ್ಲಿ ತೆರಿಗೆ ಹಾಕುತ್ತಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 40 ರಿಂದ 45 ಡಾಲರ್‍ಗಳಿಗೆ ಒಂದು ಬ್ಯಾರಲ್ ಕಚ್ಚಾ ತೈಲ ದೊರೆಯುತ್ತಿದೆ. ಸಂಸ್ಕರಣೆ, ಸಾಗಾಟ ಇತ್ಯಾದಿಗಳೆಲ್ಲವು ಸೇರಿದರೂ ರೂ.30/- ಗಳಿಗೆ ಒಂದು ಲೀಟರ್ ಪೆಟ್ರೋಲ್ ಅನ್ನು ಮಾರಬೇಕು. ಆದರೆ ಕೇಂದ್ರ ಸರ್ಕಾರವು ಜನರನ್ನು ಶತ್ರುಗಳೆಂದು ಭಾವಿಸಿ ತೆರಿಗೆ ಹಾಕುತ್ತಿದೆ. ಸಾಧ್ಯವಿರುವ ರೀತಿಯಲ್ಲೆಲ್ಲಾ ಜನರನ್ನು ಶೋಷಿಸುತ್ತಿರುವ ಅತ್ಯಂತ ಅಮಾನವೀಯ ಸರ್ಕಾರ ಇದು ಎಂದು ಟೀಕಿಸಿದರು.
ರಾಜ್ಯದ ಪಾಲಿಗೆ ಬರಬೇಕಾದ ಜಿ.ಎಸ್.ಟಿ. ಪಾಲು ಪಡೆದುಕೊಳ್ಳಿ….
ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಆರ್.ಬಿ.ಐ.ನಿಂದ ಸಾಲ ಪಡೆಯುವ ಆಯ್ಕೆಯನ್ನು ಮಾಡಿಕೊಳ್ಳಬಾರದು. ಹೀಗೆ ಮಾಡಿದರೆ ರಾಜ್ಯದ ಸಂವಿಧಾನಾತ್ಮಕ ಅಧಿಕಾರಗಳನ್ನು ಕೇಂದ್ರದ ಕಾಲಿನ ಕೆಳಗೆ ದೂಡಿದಂತಾಗುತ್ತದೆ. ಇದರಿಂದ ರಾಜ್ಯವು ಇನ್ನಷ್ಟು ಗುಲಾಮಗಿರಿಯ ಕಡೆಗೆ ಸಾಗುತ್ತದೆ. ರಾಜ್ಯದ ಪಾಲಿಗೆ ಬರಬೇಕಾದ ಜಿ.ಎಸ್.ಟಿ. ಪಾಲನ್ನು ನಿರ್ದಾಕ್ಷಿಣ್ಯವಾಗಿ ಕೇಂದ್ರದಿಂದ ಪಡೆದುಕೊಳ್ಳಬೇಕು. ಈ ಮೂಲಕ ರಾಜ್ಯದ ಹಕ್ಕನ್ನು ಎತ್ತಿ ಹಿಡಿಯಬೇಕು ಎಂದು ಸಿದ್ಧರಾಮಯ್ಯ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Key words: central govrnament – GST – Betrayal – state-Former CM Siddaramaiah