ಬೆಂಗಳೂರು,ಜನವರಿ,5,2023(www.justkannada.in): 40% ಕಮಿಷನ್ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬರುತ್ತಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಗರಿ ಅವರಿಗೆ ಸ್ವಾಗತ. ಬೆಂಗಳೂರು-ಮೈಸೂರು ದಶಪಥ ರಸ್ತೆ ಸಮೀಕ್ಷೆಗೆ ಬಂದಿರುವ ನಿತೀನ್ ಗಡ್ಕರಿ ಅವರೆ ಕಾಮಗಾರಿ ಅಕ್ರಮದ ಬಗ್ಗೆ ತುಟಿ ಬಿಚ್ಚುತ್ತೀರೋ ಎಂದು ಜೆಡಿಎಸ್ ಟ್ವಿಟ್ಟರ್ ನಲ್ಲಿ ಚಾಟಿ ಬೀಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ , ಪ್ರಧಾನಿ ನರೇಂದ್ರ ಮೋದಿ ಬಂದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಪಡಿಸಿದ್ದ ರಸ್ತೆ ಕಿತ್ತು ಹೋದ ಸಂಗತಿ ರಾಜ್ಯದ ಜನತೆಗೆ ಗೊತ್ತಿದೆ. ಇಂತಹ ಲಜ್ಜೆಗೆಟ್ಟ ಸರ್ಕಾರಕ್ಕೆ, ಅದೇ ಪಕ್ಷದ ರಸ್ತೆ ಸಾರಿಗೆ ಹಾಗೂ ಹೆದ್ದಾರಿಯ ಕೇಂದ್ರ ಸಚಿವರಾಗಿರುವ ತಾವು ಯಾವ ಸಲಹೆ ಕೊಡಲು ಬಯಸುತ್ತೀರಿ?
ಬೆಂಗಳೂರು-ಮೈಸೂರು ದಶಪಥ ಮುಖ್ಯ ಹೆದ್ದಾರಿಯು ಮಳೆಯ ಕಾರಣದಿಂದ ಜಲಾವೃತಗೊಂಡಾಗ ಜನರ ಸಂಕಷ್ಟ ಆಲಿಸಲು ಬಾರದ ಕೇಂದ್ರ ಸಚಿವರೆ, ಅದ್ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಿದ್ದೀರಿ? ಈಗ ಅದೇ ರಸ್ತೆ ಕಾಮಗಾರಿಯ ವೈಮಾನಿಕ ಸಮೀಕ್ಷೆ ಮಾಡಲು ಬಂದಿರುವ ತಮಗೆ ಅಲ್ಲಿನ ಅಸಮರ್ಪಕತೆ ವಿಷಯಗಳು ತಿಳಿದಿಲ್ಲವೆ? ಎಂದು ಪ್ರಶ್ನಿಸಿದೆ.
ಸುರಕ್ಷತೆಗಿಂತ ಅಸುರಕ್ಷತೆಯೇ ಹೆಚ್ಚಾಗಿರುವ ಈ ರಸ್ತೆಯಲ್ಲಿ ಸಿಸಿಟಿವಿಗಳು ಯಾಕೆ ಅಳವಡಿಕೆಯಾಗಿಲ್ಲ? ಇವೇ ಕಾರಣಗಳಿಂದ ಸಂಭವಿಸಿರುವ ಹತ್ತಾರು ಅಪಘಾತಗಳಿಗೆ ಯಾರು ಜವಾಬ್ದಾರರು? ಅಪಘಾತ ತಡೆ ಸಂಬಂಧ ಪೆಟ್ರೋಲಿಂಗ್ ಯಾಕೆ ಇನ್ನೂ ಆರಂಭವಾಗಿಲ್ಲ? ಸರ್ವೀಸ್ ರಸ್ತೆಯಲ್ಲಿ ವೇಗ ಮಿತಿಗಾಗಿ ವೈಜ್ಞಾನಿಕವಾಗಿ ಹಂಪ್ ಗಳನ್ನು ನಿರ್ಮಿಸಿಲ್ಲ?
ಇದೇ ದಶಪಥ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರು ಮಾಡಿದ ಸಭೆಗಳು, ನೀಡಿದ ನೆರವು ಮರೆತುಬಿಟ್ರಾ? ಇದೆಲ್ಲ ಹೋಗಲಿ, ನೀವು ಮಾಡಿರುವ ಕೆಲಸವಾದರೂ ನೆಟ್ಟಗಿದೆಯಾ?
ಬಿಜೆಪಿ ಆಡಳಿತ ಬಂದ ನಂತರ ಈ ಯೋಜನೆಗೆ ಅವೈಜ್ಞಾನಿಕವಾಗಿ ಭೂಸ್ವಾಧೀನ ಪಡಿಸಿಕೊಂಡು ಲೂಟಿ ಹೊಡೆದ ವಿಷಯಗಳು ತಮಗೆ ತಿಳಿದಿಲ್ಲವೇ, ನಿತಿನ್ ಗಡ್ಕರಿ ಅವರೆ? ಅಥವಾ 40% ಕಮಿಷನ್ ಹೊಡೆಯುವ ದಂಧೆಯಲ್ಲಿ ನಿರತರಾಗಿರುವ ನಿಮ್ಮದೇ ರಾಜ್ಯ ಸರ್ಕಾರದಿಂದ ತಮಗೂ ಏನಾದರೂ ಪಾಲು ಸಿಕ್ಕಿದೆಯಾ?
ಈ ರಸ್ತೆಯ ಕಾಮಗಾರಿಗೆ ಸಂಬಂಧಿಸಿದ ಮಹತ್ವದ ಕಾರ್ಯಗಳಿಗೆ ಅನುಕೂಲವಾಗುವ ಹಲವು ನಿರ್ಧಾಗಳನ್ನು ತೆಗೆದುಕೊಂಡಿದ್ದು ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು. ವೈಮಾನಿನ ಸಮೀಕ್ಷೆಗೆ ಬಂದಿರುವ ಗಡ್ಕರಿ ಅವರೆ, ಈ ರಸ್ತೆ ಕಾಮಗಾರಿಯಲ್ಲಿ ನಡೆದ ಅಕ್ರಮದ ಬಗ್ಗೆ ತುಟಿ ಬಿಚ್ಚುತ್ತೀರೋ? ಎಂದು ಕಿಡಿಕಾರಿದೆ.
Key words: central Minister-Nithin Gadkari,-survey – Bangalore-Mysore -Dashpath –road-JDS