ಮೈಸೂರು,ಜೂ,25,2020(www.justkannada.in): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ವಾಗ್ದಾಳಿ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊರೋನಾ ಪರಿಸ್ಥಿತಿ ನಿರ್ವಹಣೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಹೆಚ್. ಸಿ. ಮಹದೇವಪ್ಪ, ಪರಿಣಾಮಕಾರಿಯಾಗಿ ಕರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನ ಜಾನುವಾರಗಳು, ರೈತರಿಗೆ ಸಾಕಷ್ಟು ಹಾನಿಯಾಗಿದೆ. ಇಂತಹ ಸಮಯದಲ್ಲಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಬೇಕಿತ್ತು. ಆದರೆ ಅದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವುದು ಆಘಾತ. ಉಳುವವನೇ ಭೂಮಿಯ ಒಡೆಯ ಮಾಡುವ ಬದಲು ಉಳ್ಳವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಲು ಹೊರಟಿದೆ. ಭೂ ಸುಧಾರಣಾ ಕಾಯ್ದೆಯ ಕಲಂ 79 (A) (B) ಮತ್ತು ಕಲಂ 80ಕಾನೂನುಗಳು ಕೃಷಿ ಭೂಮಿಯನ್ನು ಕೃಷಿಯೇತರ ವ್ಯಕ್ತಿಗಳು ಕೊಂಡುಕೊಳ್ಳುವ ಹಾಗಿಲ್ಲ. ಈ ಕಾಯ್ದೆ ತಿದ್ದುಪಡಿಯಿಂದ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಲು ಅನುಕೂಲವಾಗಲಿದೆ. ರಾಜ್ಯದಲ್ಲಿ ಲಕ್ಷಾಂತರ ಜನರು ಕೃಷಿಯನ್ನೆ ಅವಲಂಬಿಸಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ದಲಿತ ಹಾಗೂ ಪರಿಶಿಷ್ಟ ವರ್ಗದ ಕೋಟ್ಯಂತರ ಜನರು ಕೃಷಿಯನ್ನೆ ಅವಲಂಬಿಸಿದ್ದಾರೆ. ಈ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನವಾಗಲಿದೆ. ಇದು ಆರ್ಥಿಕತೆಗೆ ಕೊಡಲಿ ಪೆಟ್ಟು ಬೀಳುವ ಕಾಯಿದೆಯಾಗಲಿದೆ. ಈ ಕುರಿತು ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಸಲಿದೆ. ಮುಂದಿನ ದಿನಗಳಲ್ಲಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.
Key words: central -state government – failure -corona –situation-Former Minister- HC Mahadevappa-mysore