ಸಿಇಒ ದುಂಡು ಮೇಜಿನ ಸಭೆ:  ನೆದರ್ಲೆಂಡ್ಸ್ ಪ್ರಧಾನಿ ಜತೆ ವಿಸ್ತೃತ ಚರ್ಚೆ ನಡೆಸಿದ ಡಿಸಿಎಂ ಮತ್ತು ಸಚಿವರು.

ಬೆಂಗಳೂರು,ಸೆಪ್ಟಂಬರ್,11,2023(www.justkannada.in): ರಾಜ್ಯದಲ್ಲಿ ಡಚ್ ಕಂಪನಿಗಳ ಹೂಡಿಕೆಗೆ ಉತ್ತೇಜನ ಹಾಗೂ ಈಗಾಗಲೇ ಹೂಡಿಕೆ‌ ಮಾಡಿರುವ ಕಂಪನಿಗಳು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ನೆದರ್ಲೆಂಡ್ಸ್‌ ಪ್ರಧಾನಿ ಮಾರ್ಕ್ ರುಟೆ ಅವರ ಸಮ್ಮುಖದಲ್ಲಿ ಸೋಮವಾರ ಸಿಇಒ‌ ದುಂಡು ಮೇಜಿನ ಸಭೆ ನಡೆಯಿತು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಈ ಮಹತ್ವದ ದುಂಡು ಮೇಜಿನ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇದ್ದರು.

ಕರ್ನಾಟಕದಲ್ಲಿನ ಡಚ್ ಕಂಪನಿಗಳ ಪರವಾಗಿ ನೆದರ್ಲೆಂಡ್ಸ್‌ ಪ್ರಧಾನಿ ಮಾರ್ಕ್ ರಟ್ ಅವರೇ ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಅವರು, ನೆದರ್ಲೆಂಡ್ಸ್‌ ನಮ್ಮ ರಾಜ್ಯದಲ್ಲಿ ಪಾರದರ್ಶಕ ಮತ್ತು ಉದಾರ ಅಬಕಾರಿ ನೀತಿ ಇರಬೇಕೆಂದು ಕೇಳಿಕೊಂಡಿರುವುದರ ಜತೆಗೆ ಅನೇಕ ವಿಚಾರಗಳನ್ನು ಗಮನಕ್ಕೆ ತಂದಿದ್ದೇವೆ. ಇವುಗಳನ್ನು ಬಗೆಹರಿಸಿ, ಸುಗಮ ಹೂಡಿಕೆಗೆ ಅವಕಾಶ ಮಾಡಿಕೊಡಲು ಎರಡೂ ಕಡೆಯವರು ಸದ್ಯದಲ್ಲೇ ಸಭೆ ಸೇರಲಿದ್ದೇವೆ ಎಂದರು.

ಜತೆಗೆ ರಾಜ್ಯದಲ್ಲಿ ಇರುವ ಹೂಡಿಕೆಸ್ನೇಹಿ ವಾತಾವರಣ, ನಿಯಂತ್ರಣ ವ್ಯವಸ್ಥೆ ಮತ್ತು ರಚನಾತ್ಮಕ ನೀತಿಗಳು, ಕೃಷಿ ಮತ್ತು ತೋಟಗಾರಿಕೆ ಕುರಿತೂ ಚರ್ಚಿಸಲಾಯಿತು ಎಂದು ಅವರು ನುಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಹೀನ್ಕೀನ್ ಬ್ರೂವರೀಸ್ ನ ಸಿಎಫ್ಒ ರಾಡೋವನ್ ಸಿಕೋರ್ಸ್ಕಿ, ನಮ್ಮ‌ ಕಂಪನಿಯು ಕಿಂಗ್‌ಫಿಷರ್ ಮತ್ತು ಹೀನ್ಕೀನ್ ಬ್ರ್ಯಾಂಡ್ ಗಳ ಅಡಿಯಲ್ಲಿ ಗುಣಮಟ್ಟದ ಬ್ರೂವರೀಸ್ ತಯಾರಿಸುತ್ತಿದ್ದು, ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.

ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಮತ್ತು ಜೈವಿಕ ಇಂಧನಗಳ ಉತ್ಪಾದನೆಗೆ ಹೇರಳ ಅವಕಾಶಗಳಿವೆ. ಡಚ್ ಕಂಪನಿಗಳು ಇದರತ್ತ ಗಮನ ಹರಿಸಬೇಕು ಎಂದರು.

ಹಂಪೆ, ಬಾದಾಮಿ, ವಿಜಯಪುರದಂಥ ಐತಿಹಾಸಿಕ ಸ್ಥಳಗಳು ನಮ್ಮಲ್ಲಿವೆ. ಜೊತೆಗೆ ಅಪಾರ ಸಂಖ್ಯೆಯ ಸಕ್ಕರೆ ಕಾರ್ಖಾನೆಗಳಿವೆ. ಇಲ್ಲಿರುವ ಹೂಡಿಕೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಆಹಾರ ಸಂಸ್ಕರಣೆ, ಬಯೋಟೆಕ್, ಫಾರ್ಮಾ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ವೃದ್ಧಿಸಬೇಕು ಎಂದು ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಅವರು, ಸರಕಾರವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 1,000 ಎಕರೆ ಪ್ರದೇಶದಲ್ಲಿ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರಿಯನ್ನು ನಿರ್ಮಿಸಲಿರುವ ವಿಚಾರವನ್ನು ಡಚ್ ನಿಯೋಗದ ಗಮನಕ್ಕೆ ತಂದರು.

ಇದಕ್ಕೆ ಸ್ಪಂದಿಸಿದ ಡಚ್ ಪ್ರಧಾನಿ ಮಾರ್ಕ್ ರಟ್, ಭಾರತದಲ್ಲಿ ತಮ್ಮ ದೇಶದ ಒಟ್ಟು 25 ಕಂಪನಿಗಳು ವಹಿವಾಟು ನಡೆಸುತ್ತಿವೆ. ಇವು ಭಾರತದಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತದಲ್ಲಿ ಶೇಕಡ 9ರಷ್ಟನ್ನು ಕರ್ನಾಟಕದಲ್ಲೇ ತೊಡಗಿಸಿವೆ ಎಂದರು.

ಸಭೆಯಲ್ಲಿ ಮಾತನಾಡಿದ ಫಿಲಿಪ್ಸ್ ಕಂಪನಿಯ ಅರವಿಂದ್ ವೈಷ್ಣವ್, ತಾವು ಸದ್ಯದಲ್ಲೇ ಯಲಹಂಕದಲ್ಲಿ ಇರುವ ಎಂಬೆಸಿ ಬಿಜಿನೆಸ್ ಹಬ್ ಗೆ ತಮ್ಮ ಕ್ಯಾಂಪಸ್ಸನ್ನು ಸ್ಥಳಾಂತರಿಸುತ್ತಿದ್ದೇವೆ. ಕಂಪನಿಯ 5 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಸುಗಮ ಓಡಾಟಕ್ಕೆ ಬಿಎಂಟಿಸಿ ವೋಲ್ವೋ ಬಸ್ಸುಗಳನ್ನು ಒದಗಿಸಬೇಕು ಮತ್ತು ಸ್ಪರ್ಧಾತ್ಮಕತೆಯನ್ನು ಎದುರಿಸಲು ರಾಜ್ಯ ಸರಕಾರವು ವಿದ್ಯುತ್ ವೆಚ್ಚದ ಮೇಲೆ ಶೇ.20ರಷ್ಟು ಸಬ್ಸಿಡಿ ನೀಡಬೇಕು ಹಾಗೂ ಜಿಎಸ್ಟಿ ಮರುಪಾವತಿಯನ್ನು ಸುಲಭಗೊಳಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಡಚ್ ಕಂಪನಿಗಳಾದ ಬುಕಿಂಗ್.ಕಾಂ ಪ್ರತಿನಿಧಿ ಪೀಟರ್ ಲಾಕ್ಬಿಹಲೆರ್, ಶೆಲ್ ಕಂಪನಿಯ ನಿತಿನ್ ಪ್ರಸಾದ್,  ಕೆಎಲ್ಎಂ ನ ಕ್ರಿಶ್ಚಿಯನ್ ವ್ಯಾನ್ ಡಿ ಕೊಪೆಲ್, ಎನ್ಎಕ್ಸ್ಪಿ ಯ ಮಾರಿಸ್ ಗೆರೇಟ್ಸ್, ಕೆಪಿಎಂಜಿಯ ಮಾರ್ಕ್ ಬ್ರೋಸ್ಕ್ಜಿ, ಆರ್ಕ್ಯಾಡಿಸ್ ನ ವೆಂಕಟ ಚುಂಡೂರು, ರಾಂಡ್ ಸ್ಟಡ್ ಕಂಪನಿಯ ವಿಶ್ವನಾಥ್ ಪುದುಕ್ಕಾಡ್, ಈಸ್ಟ್ ವೆಸ್ಟ್ ಸೀಡ್ಸ್ ನ ದಿಲೀಪ್ ರಂಜನ್, ಕೋಪರ್ಟ್ ಕಂಪನಿಯ ಹೆನ್ರಿ ಓಶ್ತಿಯೋಕ್ ಮುಂತಾದವರು ಭಾಗವಹಿಸಿದ್ದರು.ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಇತರರು‌ ಇದ್ದರು.

Key words: CEO -Round Table- Meeting- DCM – Ministers – discussions- Netherlands-PM