ಬೆಂಗಳೂರು, ಜುಲೈ,27,2023(www.justkannada.in): ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದವರಿಗೆ ಅಮಾಯಕರು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.
ಈ ಕುರಿತು ಇಂದು ಮಾತನಾಡಿದ ಗೋವಿಂದ ಕಾರಜೋಳ, ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ಅವಮಾನ ಆಗಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ಕೇಸ್ ವಾಪಸ್ ತೆಗೆದುಕೊಂಡರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ತನ್ವೀರ್ ಸೇಠ್ ಗೆ ಎಸ್ ಡಿಪಿಐನವರು ಚಾಕು ಹಾಕಿ ಸಾಯಿಸಲು ಹೊರಟಿದ್ದರು. ಆಗ ಅವರನ್ನು ನೋಡಲು ಯಾರೂ ಹೋಗಿರಲಿಲ್ಲ. ಆಗ ತನ್ವೀರ್ ಸೇಠ್ ಮನೆಗೆ ಮಾಜಿ ಸಚಿವ ಸೋಮಣ್ಣ ಹೋಗಿದ್ದರು. ಮುಸ್ಲಿಮರ ಮತಕ್ಕೆ ಹೆದರಿ ಇಷ್ಟೊಂದು ಕೆಟ್ಟ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಮತಕ್ಕಾಗಿ ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ಅಭಿವೃದ್ಧಿಗೆ ಹಣವಿಲ್ಲ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಬಗ್ಗೆ ಹರಿಹಾಯ್ದ ಗೋವಿಂದ ಕಾರಜೋಳ, ಗ್ಯಾರಂಟಿಗಳಿಗೆ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ ಅಂತ ಹೇಳುತ್ತಾರೆ. ಅಭಿವೃದ್ಧಿ ಮಾಡಲ್ಲ ಅಂದರೆ ಇವರು ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.
Key words: Certificate -innocence – fire –akhanda shrinivas murthy- house-Govinda Karajola.