ಬೆಂಗಳೂರು,ಏಪ್ರಿಲ್,17,2025 (www.justkannada.in): ಕೊನೇ ಕ್ಷಣದಲ್ಲಿ ಬಂದು ಸಿಇಟಿ ಪರೀಕ್ಷೆ ಬರೆಯಲು ಪ್ರಯತ್ನಿಸಿದ ಅಭ್ಯರ್ಥಿಯೊಬ್ಬರು ನಕಲಿ ಎಂಬುದನ್ನು ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆ ಹಚ್ಚುವ ಆ್ಯಪ್ ಗುರುತಿಸಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಮಲ್ಲೇಶ್ವರದ 7ನೇ ಅಡ್ಡರಸ್ತೆಯ ಸಿಲ್ವರ್ ವ್ಯಾಲಿ ಪಬ್ಲಿಕ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ತುಬಾ ಫಾತೀಮಾ ಜಮೀಲ್ ಎಂಬಾಕೆ ಇಂದು ಬೆಳಿಗ್ಗೆ ಗಣಿತ ವಿಷಯ ಬರೆಯಲು ಬಂದವರು ನೇರವಾಗಿ ಶೌಚಗೃಹಕ್ಕೆ ಹೋಗಿ ಗಂಟೆಯಾದರೂ ಹೊರ ಬಂದಿರಲಿಲ್ಲ. ಇನ್ನೇನು ಪರೀಕ್ಷೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಹೊರ ಬಂದು ಕ್ಯೂಆರ್ ಕೋಡ್ ಇರುವ ಪ್ರವೇಶ ಪತ್ರ ತೋರಿಸಿ, ಒಳ ಹೋಗಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಮುಖ ಚಹರೆ ಪತ್ತೆ ಆ್ಯಪ್ ಮೂಲಕ ಅವರ ಭಾವಚಿತ್ರ ತೆಗೆದಾಗ ಅವರು ನಕಲಿ ಎಂಬುದು ಗೊತ್ತಾಗಿದೆ. ತಕ್ಷಣ ಈ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತರಬೇಕೆನ್ನುವಷ್ಟರಲ್ಲಿ ಅಲ್ಲಿಂದ ಅವರು ಕಾಲ್ಕಿತ್ತಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಇವರು ಟಬು ನಾಝ್ ಎಂಬ ನೈಜ ಅಭ್ಯರ್ಥಿಯ ಪ್ರವೇಶ ಪತ್ರಕ್ಕೆ ತನ್ನ ಚಿತ್ರ ಅಂಟಿಸಿಕೊಂಡಿದ್ದರು. ಅಲ್ಲದೆ, ಪರೀಕ್ಷಾ ದಿನಾಂಕಗಳನ್ನೂ ತಪ್ಪಾಗಿ ನಮೂದಿಸಿದ್ದರು ಎಂಬುದು ಗೊತ್ತಾಗಿದೆ. ಈ ಬಗ್ಗೆ ವಿಡಿಯೊ ದೃಶ್ಯ ಸಮೇತ ವರದಿ ನೀಡಲು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ನಕಲಿ ಅಭ್ಯರ್ಥಿಗಳ ಪತ್ತೆ ಸಲುವಾಗಿ ಕೆಇಎ ಆರಂಭಿಸಿರುವ ಈ ಹೊಸ ವ್ಯವಸ್ಥೆ ನಿಜಕ್ಕೂ ಅನುಕೂಲಕರವಾಗಿದ್ದು, ಎರಡನೇ ದಿನ ಕೂಡ ಸಂಪೂರ್ಣವಾಗಿ ಇದರ ಮೂಲಕವೇ ತಪಾಸಣೆ ಮಾಡಲಾಗಿದೆ. ಎಲ್ಲಿಯೂ ಯಾವ ರೀತಿಯ ತಾಂತ್ರಿಕ ದೋಷಗಳು ಕಂಡುಬಂದಿಲ್ಲ ಎಂದು ಎಚ್.ಪ್ರಸನ್ನ ಅವರು ತಿಳಿಸಿದರು.
ಅಭ್ಯರ್ಥಿಗಳನ್ನು ತಪಾಸಣೆ ಮಾಡಿದ ಇಡಿ, ಎಓ
ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮತ್ತು ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಗುರುವಾರ ಭೇಟಿ ನೀಡಿ ಖುದ್ದು ಅಭ್ಯರ್ಥಿಗಳನ್ನು ಕ್ಯೂ ಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆ ಆ್ಯಪ್ ಮೂಲಕ ತಪಾಸಣೆ ಮಾಡಿದರು.
ಕೆಇಎ ಅಭಿವೃದ್ಧಿಪಡಿಸಿರುವ ಹಾಗೂ ಇದೇ ಮೊದಲ ಬಾರಿಗೆ ಜಾರಿಗೆ ತಂದಿರುವ ಈ ವ್ಯವಸ್ಥೆಯ ಕಾರ್ಯನಿರ್ವಹಣೆ ನೋಡಿ ಮೆಚ್ವುಗೆ ವ್ಯಕ್ತಪಡಿಸಿದರು. ಸ್ವತಃ ಇಬ್ಬರೂ ಅಧಿಕಾರಿಗಳು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳ ಭಾವಚಿತ್ರ ತೆಗೆದು ನೈಜತೆ ಪರಿಶೀಲಿಸಿದರು.
Key words: CET exam, Fake candidate, facial recognition, app, investigation