ಬೆಂಗಳೂರು,ಜುಲೈ,30,2022(www.justkannada.in): 2022-23ನೇ ಶೈಕ್ಷಣಿಕ ಸಾಲಿನಲ್ಲಿ ನಾನಾ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಡೆಸಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಸಲಾಗಿದ್ದು, ಎಲ್ಲ ವಿಭಾಗಗಳ ಟಾಪರ್ ಗಳು ಈ ಬಾರಿ ಬಾಲಕರೇ ಆಗಿರುವುದು ವಿಶೇಷವಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶದ ಮಾಹಿತಿಯನ್ನು ನೀಡಿದರು.
ಎಂಜಿನಿಯರಿಂಗ್, ಕೃಷಿ, ನ್ಯಾಚುರೋಪಥಿ ಮತ್ತು ಯೋಗ, ಪಶುಸಂಗೋಪನೆ, ಫಾರ್ಮಸಿ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗಿತ್ತು. ಅಚ್ಚರಿಯ ಅಂಶವೆಂದರೆ, ಈ ಬಾರಿ ನ್ಯಾಚುರೋಪತಿ ವಿಭಾಗ ಹೊರತುಪಡಿಸಿ ಉಳಿದ ಎಲ್ಲ ವಿಭಾಗಗಳಲ್ಲೂ ಬಾಲಕರೇ ಅಗ್ರ 9 ರಾಂಕ್ ಗಳನ್ನೂ ಬಾಚಿಕೊಂಡು, ಪಾರಮ್ಯ ಮೆರೆದಿದ್ದಾರೆ.
ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ಒಂಬತ್ತು ರಾಂಕ್ ಪಡೆದಿರುವುದು ಬಾಲಕರೇ ಆಗಿದ್ದು, ಎಲ್ಲರೂ ಬೆಂಗಳೂರಿನ ವಿದ್ಯಾರ್ಥಿಗಳೇ ಆಗಿದ್ದಾರೆ. ಸಿಬಿಎಸ್ಸಿಯಲ್ಲಿ ವ್ಯಾಸಂಗ ಮಾಡಿದವರೇ ಅದರಲ್ಲೂ ಹೆಚ್ಚು ಇದ್ದಾರೆ ಎಂದು ಅವರು ವಿವರಿಸಿದರು.
ಈ ಬಾರಿಯ ಸಿಇಟಿಯಲ್ಲಿ ವಿದ್ಯಾರ್ಥಿಗಳಿಗೆ 7 ಕೃಪಾಂಕಗಳನ್ನು (ಗಣಿತ ವಿಷಯಕ್ಕೆ ಐದು, ರಸಾಯನವಿಜ್ಞಾನ ಮತ್ತು ಭೌತವಿಜ್ಞಾನ ವಿಷಯಕ್ಕೆ ತಲಾ ಒಂದು ಅಂಕ) ನೀಡಲಾಗಿದೆ. ಒಟ್ಟು 2,16,559 ಮಂದಿ ಸಿಇಟಿಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2,10,829 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಡು 486 ಕೇಂದ್ರಗಳಲ್ಲಿ ಸಿಇಟಿ ನಡೆಸಲಾಗಿತ್ತು ಎಂದು ಅವರು ತಿಳಿಸಿದರು.
ಆಗಸ್ಟ್ 5ರಿಂದ ದಾಖಲೆಗಳ ಪರಿಶೀಲನೆ ಆನ್ ಲೈನ್ ನಲ್ಲಿ ನಡೆಯಲಿದೆ. ರಕ್ಷಣೆ, ಎನ್.ಸಿ.ಸಿ, ಕ್ರೀಡೆ, ವಿಕಲಚೇತನ ಇತ್ಯಾದಿ ಕೋಟಾಗಳ ಅಡಿಯಲ್ಲಿ ಬರುವ ಶೇ.10ರಷ್ಟು ವಿದ್ಯಾರ್ಥಿಗಳ ದಾಖಲೆಗಳನ್ನು ಮಾತ್ರ ಭೌತಿಕವಾಗಿ ಪರಿಶೀಲಿಸಲಾಗುತ್ತದೆ ಎಂದು ಅವರು ವಿವರಿಸಿದರು.
ನೀಟ್ ಪರೀಕ್ಷೆಯ ಫಲಿತಾಂಶ ಬಂದ ಬಳಿಕ, ಅಲ್ಲಿಯ ಅಂಕಗಳನ್ನು ಪರಿಗಣಿಸಿ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ ಮತ್ತು ಹೋಮಿಯೋಪತಿ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ http://karresults.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಇದ್ದರು.
ಕೆಇಎ: ಬಹುತೇಕ ಎಲ್ಲವೂ ಆನ್ಲೈನ್
ಕೌನ್ಸೆಲಿಂಗ್ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಎದುರಾಗುತ್ತಿದ್ದ ಅನೇಕ ಸಮಸ್ಯೆಗಳನ್ನು ಮನಗಂಡು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲ ಹಂತದ ಪ್ರಕ್ರಿಯೆಗಳನ್ನು ಆನ್ ಲೈನ್ ನಲ್ಲಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಆದಾಯ, ಜಾತಿ, ವ್ಯಾಸಂಗ ಪ್ರಮಾಣ ಪತ್ರ, ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ, ಭಾಷಾ ಅಲ್ಪಸಂಖ್ಯಾತರ ಪ್ರಮಾಣ ಪತ್ರ, ಇತ್ಯಾದಿ ಪ್ರಮಾಣ ಪತ್ರಗಳನ್ನು ಆನ್ ಲೈನ್ ನಲ್ಲೇ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಆನ್ ಲೈನ್ ನಲ್ಲಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಸಿಬಿಎಸ್ಸಿ, ಐಸಿಎಸ್ ಇ ಹೊರತುಪಡಿಸಿ ರಾಜ್ಯ ಪಠ್ಯಕ್ರಮದಲ್ಲಿ ಪಿಯುಸಿ ಮಾಡಿದವರ ಅಂಕ ಪಟ್ಟಿಗಳನ್ನು ಕೂಡ ಕೆಇಎ ಅನ್ ಲೈನ್ ನಲ್ಲಿ ಪಡೆದು, ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮಾಡಲಿದೆ ಎಂದು ಅವರು ವಿವರಿಸಿದರು.
ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ಸುಲಭ-ಸರಳವಾಗಿ ಅರ್ಜಿಗಳನ್ನು ಸಲ್ಲಿಸುವ ಹಾಗೆ ಮಾಡುವುದು ನಮ್ಮ ಉದ್ದೇಶ. ಈ ಸಲುವಾಗಿ ಸಾಫ್ಟ್ ವೇರ್ ಉನ್ನತೀಕರಣ ಕೂಡ ಮಾಡಲಾಗುತ್ತಿದೆ. ಕೊನೆ ಹಂತದ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.
ಪ್ರಾಧಿಕಾರದ ಸಹಾಯವಾಣಿಯ ಸಾಫ್ಟ್ ವೇರ್ ಕೂಡ ಉನ್ನತೀಕರಿಸುತ್ತಿದ್ದು, ಒಮ್ಮೆಗೇ ಸಾವಿರ ಜನರು ಕರೆ ಮಾಡಿದರೂ ಅದನ್ನು ನಿರ್ವಹಿಸುವ ಸಾಮರ್ಥ್ಯ ವೃದ್ಧಿಸಲಾಗಿದೆ. ಇದರಿಂದ ಅನುಮಾನಗಳಿಗೆ ಬೇಗ ಪರಿಹಾರ ಸಿಗಲಿದೆ ಎಂದು ಸಚಿವರು ವಿವರಿಸಿದರು.
ಕೋವಿಡ್ ಪಾಸ್: ಸಿಇಟಿ ಅಂಕ ಮಾತ್ರ ಗಣನೆಗೆ
ಕಳೆದ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದು, ಅಂತಹ ವಿದ್ಯಾರ್ಥಿಗಳ ರ್ಯಾಂಕಿಂಗ್ ಅನ್ನು ಕೇವಲ ಸಿಇಟಿ ಪರೀಕ್ಷೆಯ ಅಂಕಗಳನ್ನು ಆಧಾರಿಸಿಯೇ ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ವಿವರಿಸಿದ್ದಾರೆ.
ಸಾಮಾನ್ಯವಾಗಿ ಕೆಇಎನಲ್ಲಿ ಸಿಇಟಿ ಮತ್ತು ದ್ವಿತೀಯ ಪಿಯುಸಿ- ಎರಡೂ ಪರೀಕ್ಷೆಗಳ ಅಂಕಗಳನ್ನು ಆಧಾರವಾಗಿ ಇಟ್ಟುಕೊಂಡೇ ರ್ಯಾಂಕಿಂಗ್ ನಿರ್ಧರಿಸಲಾಗುತ್ತದೆ. ಈ ಬಾರಿಯೂ ಅದೇ ರೀತಿ ಮಾಡಲಾಗಿದೆ. ಆದರೆ, ಕಳೆದ ಬಾರಿ ಕೋವಿಡ್ ಇದ್ದ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಿರಲಿಲ್ಲ. ಹೀಗಾಗಿ ಆ ಸಂದರ್ಭದಲ್ಲಿ ಕೇವಲ ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧಾರಿಸಿಯೇ ರ್ಯಾಂಕಿಂಗ್ ನೀಡಲಾಗಿತ್ತು. ಆ ವರ್ಷದ ವಿದ್ಯಾರ್ಥಿಗಳಿಗೆ ಅದೇ ನಿಯಮ ಈಗಲೂ ಅನ್ವಯವಾಗುತ್ತದೆ ಎಂದು ರಮ್ಯಾ ತಿಳಿಸಿದ್ದಾರೆ.
ಕಳೆದ ವರ್ಷದವರೇ ಸುಮಾರು 24 ಸಾವಿರ ಮಂದಿ ಈ ಬಾರಿಯೂ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದು, ಅವರೆಲ್ಲರೂ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿ ಸಿಇಟಿ ರ್ಯಾಂಕಿಂಗ್ ಪ್ರಕಟಿಸಿ ಎನ್ನುವ ಒತ್ತಾಯ ಮಾಡುತ್ತಿದ್ದು, ಇದನ್ನು ಒಪ್ಪಲು ಸಾಧ್ಯ ಇಲ್ಲ ಎನ್ನುವ ಉತ್ತರವನ್ನು ರಮ್ಯಾ ಅವರು ಕೊಟ್ಟಿದ್ದಾರೆ.
ಒಂದು ವೇಳೆ ಇವರ ಮನವಿಯನ್ನು ಪರಿಗಣಿಸಿದರೆ ಕಳೆದ ಬಾರಿ ಕೇವಲ ಸಿಇಟಿ ಪರೀಕ್ಷೆ ಮೇಲೆ ರ್ಯಾಂಕಿಂಗ್ ಪಡೆದು ಈಗ ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎಂಜಿನಿಯರಿಂಗ್ RANK ವಿಜೇತರು
- ಅಫೂರ್ವ ಟಂಡನ್
- ಸಿದ್ಧಾರ್ಥ್ ಸಿಂಗ್
- ಆತ್ಮಕೂರಿ ವೆಂಕಟ ಮಾಧವ ಶ್ರೀರಾಮ್.
- ಆರ್ ಕೆ ಶ್ರೀಧರ್
- ವಿಶಾಲ್ ಬೈಸಾನಿ
- ಕೆ ವಿ ಸಾಗರ್
- ವಿ.ಮಹೇಶಕುಮಾರ್
- ಜಿ ವಿ ಸಿದ್ಧಾರ್ಥ್
- ವಿ. ಸಾತ್ತ್ವಿಕ್
(ಎಲ್ಲರೂ ಬೆಂಗಳೂರಿನ ವಿದ್ಯಾರ್ಥಿಗಳು)
Key words: CET -Result -Online verification -documents -Aug.5