ಕಾಂಗ್ರೆಸ್ ಒಂದು ‘ಹನಿಟ್ರ್ಯಾಪ್’  ಕಂಪನಿ:  ಸಿಎಂ ಕೂಡ ಟ್ರ್ಯಾಪ್ ಆಗಿದ್ದಾರೇನೋ..? ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಮಾರ್ಚ್,28,2025 (www.justkannada.in): ಕಾಂಗ್ರೆಸ್ ಅನ್ನುವಂತದ್ದೇ ಒಂದು ಹನಿ ಟ್ರ್ಯಾಪ್  ಕಂಪನಿ. ಯಾರು ಕಾಂಗ್ರೆಸ್ ವಿರೋಧಿಸುತ್ತಾರೊ, ಪ್ರಶ್ನೆ ಮಾಡುತ್ತಾರೋ , ಭ್ರಷ್ಟಾಚಾರ ಹೊರ ತರುತ್ತಾರೋ ಅವರನ್ನ ಟ್ರ್ಯಾಪ್ ಮಾಡುತ್ತಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಯಣಸ್ವಾಮಿ,  ಕಾಂಗ್ರೆಸ್ ಅನ್ನುವಂತದ್ದೆ ಒಂದು ಹನಿ ಟ್ರ್ಯಾಪ್  ಕಂಪನಿ. ಹೊರಗಿನವರಿಗಿಂತ ಕಾಂಗ್ರೆಸ್ ನವರನ್ನೆ ಹೆಚ್ಚು ಟ್ರ್ಯಾಪ್ ಮಾಡುತ್ತಾರೆ. ಹನಿಟ್ರ್ಯಾಪ್  ಮಾತ್ರ ಅಲ್ಲ ಪೋನ್  ಟ್ಯಾಪ್ ಕೂಡ ಮಾಡುತ್ತಾರೆ. ಇದೆಲ್ಲದಕ್ಕೂ ಉತ್ತರ ಕೋಡಬೇಕಾದ ಸಿಎಂ  ಬಾಯಿಮುಚ್ಚಿ ಕುಳಿತಿದ್ದಾರೆ. ನನಗೆ ಅನುಮಾನ ಇದೆ  ಸಿಎಂ ಕೂಡ ಟ್ರ್ಯಾಪ್ ಆಗಿದ್ದಾರೇನೋ.? ಇವೆಲ್ಲಾ ಸತ್ಯ ಆಚೆ ಬಂದರೆ ಕಾಂಗ್ರೆಸ್ ಮರ್ಯಾದೆ ಹೋಗುತ್ತೆ ಅಂತ ಸುಮ್ಮನಿದ್ದಾರೆ. ಮಾಡೋದೆಷ್ಟು ತಪ್ಪೊ ಅದನ್ನ ಮುಚ್ಚಿ ಹಾಕೋದು ತಪ್ಪೆ. ಅದನ್ನ ಮುಚ್ಚಿಡಲು ಬಿಜೆಪಿ ಬಿಡೋಲ್ಲ ಎಂದರು.

ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಬಿಜೆಪಿಗರು ಮಾತನಾಡಿದರೆ ಕಾಂಗ್ರೆಸ್ ನವರು ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಕುಣಿಯುತ್ತಾರೆ. ಈಗ ಅವರೆ ಮುಸ್ಲಿಂ ಮೀಸಲಾತಿ ಕುರಿತು ಸಂವಿಧಾನ ಬದಲಾಯಿಸುತ್ತೇವೆ ಅಂದಿದ್ದಾರೆ. ಅದನ್ನು ಸಾಬೀತು ಪಡಿಸಿದರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂತಹ ವಿಪರ್ಯಾಸ ಇದೆ. ರಾಜ್ಯಾದ್ಯಂತ ಅವರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟಿಸುತ್ತಿದೆ.  ಇನ್ನು ಕೂಡ ಕೆಲ ದಲಿತ ಹೋರಾಟಗಾರರು ಚಕಾರ ಎತ್ತುತ್ತಿಲ್ಲ. ಅವರಿಗೆ ಅಂಬೇಡ್ಕರ್ ಹಾಗೂ ಸಂವಿಧಾನಕ್ಕಿಂತ ಕಾಂಗ್ರೆಸ್ ಹೆಚ್ಚಾಗಿರಬೇಕು. ಅವರಿಗೆ ಅಂಬೇಡ್ಕರ್ ಅವರೇ ಬುದ್ದಿ ಹೇಳಬೇಕು ಎಂದು ಕಿಡಿಕಾರಿದರು.

ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಯತ್ನಾಳ್ ರವರು ನಮ್ಮ ಪಕ್ಷದ ನಾಯಕರು. ಉಚ್ಚಾಟನೆಗೊಂಡಿದ್ದಾರೆ. ನಮ್ಮದ್ದು ಬಿಜೆಪಿ ನಾಯಕರ ಪಕ್ಷ ಅಲ್ಲ,  ಕಾರ್ಯಕರ್ತರ ಪಕ್ಷ. ಹೈ ಕಮಾಂಡ್ ಆದೇಶಕ್ಕೆ ನಾವೆಲ್ಲರೂ ತಲೆಬಾಗಲೇಬೇಕು. ಯತ್ನಾಳ್ ರವರು ಇತಿಮಿತಿಯಲ್ಲಿ ಇದ್ದಿದ್ದರೆ ಇದು ಆಗುತ್ತಿರಲಿಲ್ಲ. ವಿರೋಧ ಪಕ್ಷದವರನ್ನು ವಿರೋಧಿಸುವ ಬದಲು ನಮ್ಮ ಪಕ್ಷವನ್ನೆ ವಿರೋಧಿಸಿದರು. ಇದು ಎಲ್ಲರಿಗೂ ಒಂದು ಪಾಠ. ಛಲವಾದಿ ನಾರಾಯಣಸ್ವಾಮಿ ಇಲ್ಲ ಅಂದರೆ ಬಿಜೆಪಿ ಬಾಗಿಲು ಹಾಕುವುದಿಲ್ಲ. ಯಾರು ಪಕ್ಷಕ್ಕೆ ಅನಿವಾರ್ಯ ಇಲ್ಲ ಪಕ್ಷ ನಮಗೆ ಅನಿವಾರ್ಯ. ಯಾರು ಪಕ್ಷಕ್ಕಿಂತ ದೊಡ್ಡವರಾಗಿ ವರ್ತಿಸುತ್ತಾರೋ ಆಗ ಇಂತಹ ಘಟನೆ ನಡೆಯುತ್ತೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

Key words: Congress, honeytrap, company, Chalavadi Narayanaswamy