ಬೆಂಗಳೂರು, ಮಾ.೧೫, ೨೦೨೪ ಚಾಮರಾಜನಗರ ಲೋಕಸಭೆ ಮೀಸಲು ಕ್ಷೇತ್ರದ ಅಭ್ಯರ್ಥಿಗಳು ಯಾರಾಗಬಹುದು ಎಂಬ ಕುತೂಹಲಕ್ಕೆ ಅರ್ಧ ತೆರೆಬಿದ್ದಿದೆ. ಬಿಜೆಪಿ ಅಚ್ಚರಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಾಲರಾಜ್ ಹೆಸರನ್ನು ಘೋಷಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕುತೂಹಲ ಇನ್ನೂ ಕಾಯ್ದುಕೊಂಡಿದೆ.
ಪರಿಣಾಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗಬಹುದು ಎಂಬ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಚರ್ಚೆ ಶುರುವಾಗಿದೆ. ಈಗಾಗಲೇ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಾಲರಾಜ್ ಅವರನ್ನು ಘೋಷಿಸಿರುವುದರಿಂದ ಕಾಂಗ್ರೆಸ್ ಹುರಿಯಾಳು ಯಾರು ಎಂಬುದು ಕೌತುಕ ಮೂಡಿಸಿದೆ.
ಈ ಕ್ಷೇತ್ರದಲ್ಲಿ ಹೆಚ್ಚಾಗಿ ಗೆದ್ದಿರುವುದು ಕಾಂಗ್ರೆಸ್ ಅಭ್ಯರ್ಥಿಗಳು. ಆದರೆ, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ವಿ.ಶ್ರೀನಿವಾಸಪ್ರಸಾದ್ ಅವರು ಆರ್.ಧ್ರುವನಾರಾಯಣ ಅವರ ಎದುರು ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆ ಮೂಲಕ ಚಾ.ನಗರ ಲೋಕಸಭೆ ಮೀಸಲು ಕ್ಷೇತ್ರದಲ್ಲಿಬಿಜೆಪಿ ಅಭ್ಯರ್ಥಿಯೊಬ್ಬರು ಮೊದಲ ಗೆಲುವು ಕಂಡರು.
ಆದರೆ ಬದಲಾದ ಸನ್ನಿವೇಶದಲ್ಲಿ, ಹಾಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ತಾವು ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದು, ಮಾ.17ರಂದು ತಮ್ಮ ನಿವೃತ್ತಿ ಘೋಷಣೆಗೆ ಸಲಕ ಸಿದ್ಧತೆ ನಡೆಸಿದ್ದಾರೆ.
ಎರಡು ಬಾರಿ ಸಂಸದರಾಗಿ, ಕಳೆದ ಬಾರಿ ಪರಾಭವಗೊಂಡಿದ್ದ ಕಾಂಗ್ರೆಸ್ನ ಆರ್.ಧ್ರುವನಾರಾಯಣ ಅವರು ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅವರಿಗೆ ಪರ್ಯಾಯವಾಗಿ, ಅವರಷ್ಟೆ ವರ್ಚಸ್ಸಿರುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಾಗಿದೆ.
ಹೀಗಾಗಿ ಆಯ್ಕೆ ವಿಚಾರದಲ್ಲಿಸಾಕಷ್ಟು ಚರ್ಚೆ ನಡೆದಿದೆ. ಜಸ್ಟ್ ಕನ್ನಡಗೆ ಲಭ್ಯವಾದ ಮಾಹಿತಿ ಪ್ರಕಾರ, ಕೈ ಮುಖಂಡರುಗಳು ಚಾ.ನಗರ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಅವರ ಹೆಗಲಿಗೆ ಹಾಕಿದ್ದಾರೆ. ಅವರು ಯಾರ ಹೆಸರನ್ನು ಸೂಚಿಸುವರೋ ಅದೇ ಅಂತಿಮ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಸಮ್ಮತಿಸಿದ್ದು, ಆಯ್ಕೆಯನ್ನು ಸಿದ್ದರಾಮಯ್ಯ ಅವರೇ ಅಂತಿಮಗೊಳಿಸಲಿ ಎಂದಿದ್ದಾರೆ.
ಭಾರತೀಯ ಜನತಾ ಪಾರ್ಟಿಯಿಂದ ಈ ಬಾರಿ ಅಚ್ಚರಿ ಅಭ್ಯರ್ಥಿಯಾಗಿ ಬಾಲರಾಜ್ ಅವರನ್ನಿ ಕಣಕ್ಕಿಳಿಸಲಾಗಿದೆ. ಬಿಜೆಪಿ ವರಿಷ್ಠರು ಈಗಾಗಲೇ ಹಲವು ಕ್ಷೇತ್ರಗಳಲ್ಲಿಇಂಥ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡಿದ್ದಾರೆ. ೨೦೧೩ ರಲ್ಲಿ ಪತ್ರಕರ್ತ ಪ್ರತಾಪ್ ಸಿಂಹ ರನ್ನು ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಯಶ ಕಂಡಿದ್ದ ಉದಾಹರಣೆ ಕಣ್ ಮುಂದಿದೆ. ಅದೇ ರೀತಿ ಬೆಂಗಳೂರಿಂದ ತೇಜಸ್ವಿಸೂರ್ಯರನ್ನು ಅಖಾಡಕ್ಕಿಳಿಸಿ ಸಕ್ಸಸ್ ಆಗಿದೆ.
ಈ ಹಿನ್ನೆಲೆಯಲ್ಲಿಈ ಬಾರಿ ಚಾಮರಾಜನಗರದಲ್ಲೂ ಅಂತಹ ಪ್ರಯೋಗ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ಸಿದ್ದರಾಮಯ್ಯ ಅವರಿಗೆ ನಿಷ್ಠೆ ಹೊಂದಿರುವ, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧರಾಗಿ ಕ್ಷೇತ್ರದ ಸರ್ವ ಜನಾಂಗಗಳ ಹಿತಕಾಯಲು ಬದ್ಧವಾಗಿರುವ ಹಾಗೂ ಸಂಸತ್ತಿನಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಉತ್ತಮವಾಗಿ ಗಮನ ಸೆಳೆಯುವ ವಾಗ್ಮಿಗೆ ಹುಡುಕಾಟ ನಡೆಯುತ್ತಿದೆ. ನಾಮಕವಾಸ್ತೆ ಅಭ್ಯರ್ಥಿಯನ್ನು ಗೆಲ್ಲಿಸಿ ಸದನದಲ್ಲಿ ಬಾಯೇ ಬಿಡದಿದ್ದರೆ ಕ್ಷೇತ್ರದ ಜನತೆಗೆ ಏನು ಪ್ರಯೋಜನ.? . ಆದ್ದರಿಂದ ಉತ್ತಮ ಭಾಷಾಜ್ಞಾನವನ್ನು ಹೊಂದಿರುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆ. ಈ ಕ್ಷೇತ್ರದಲ್ಲಿ ಬಹುಪಾಲು ಗೆದ್ದಿರುವುದು ಕೈ ಅಭ್ಯರ್ಥಿಗಳೇ. ಪ್ರಸ್ತುತ ಜಿಲ್ಲೆಯಲ್ಲಿನ ಶಾಸಕರನ್ನು ಪರಿಗಣಿಸಿದರು ಕಾಂಗ್ರೆಸ್ ಶಾಸಕರೇ ಹೆಚ್ಚಾಗಿರುವುದು. ಈ ಹಿನ್ನೆಲೆಯಲ್ಲಿ ಒಂದು ಉತ್ತಮ ಸಂದೇಶ ಕೊಡುವ ನಿಟ್ಟಿನಲ್ಲಿ ʼ ಡಾರ್ಕ್ ಹಾರ್ಸ್ ʼ ಒಂದನ್ನು ಕಣಕ್ಕಿಳಿಸುವುದು ನಿಶ್ಚಿತ. ಇಂದು ರಾತ್ರಿ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿ ಅಂತಿಮವಾಗಲಿದೆ. ಬಹಶಃ, ಶನಿವಾರದ ವೇಳೆಗೆ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ.
key words : Chamarajanagar ̲ congress ̲ Lok Sabha ̲ ticket ̲̲ dark horse