ಮೈಸೂರು,ಜುಲೈ,10,2023(www.justkannada.in): ಇಂದು ಬೆಟ್ಟದ ತಾಯಿಗೆ ಹುಟ್ಟು ಹಬ್ಬದ ಸಂಭ್ರಮ, ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದ್ದು ಭಕ್ತರು ಲಗ್ಗೆ ಇಟ್ಟು ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿಂದು ವಿಶೇಷ ಪೂಜಾ ಕೈಂಕರ್ಯ ನೆರವೇರಿದ್ದು, ಸಾರ್ವಜನಿಕರಿಗೆ ಬೆಳಗ್ಗೆ 9 ಗಂಟೆ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ದರ್ಶನಕ್ಕೆ ಭಕ್ತ ಸಮೂಹವೇ ಆಗಮಿಸುತ್ತಿದ್ದು, ಬೆಳಗ್ಗೆ 10 ಗಂಟೆಗೆ ಬಳಿಕ ಪಲ್ಲಕ್ಕಿ ಉತ್ಸವ ಜರುಗುತ್ತಿದೆ.
ಚಿನ್ನದ ಪಲ್ಲಕ್ಕಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ರಾಜವಂಶಸ್ಥ ಯದುವೀರ್ ದಂಪತಿ ಆಗಮಿಸಿದ್ದು, ಪಲ್ಲಕ್ಕಿ ಉತ್ಸವಕ್ಕೆ ಪೂಜೆ ಸಲ್ಲಿಸಿದ್ದಾರೆ. ಇನ್ನು ತಾಯಿ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ರಾಜ್ಯದ ಮೂಲೆ ನಾನಾ ಭಾಗಗಳಿಂದ ಇಂದು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆ ನಂತರ ಸರ್ಕಾರಿ ಬಸ್ ಗಳ ಮೂಲಕ ಬೆಟ್ಟಕ್ಕೆ ಬರಲು ಅವಕಾಶ ಕಲ್ಪಿಸಲಾಗಿದ್ದು, ಖಾಸಗಿ ವಾಹನಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಪ್ರಧಾನ ಅರ್ಚಕ ಶಶಿ ಶೇಖರ್ ದೀಕ್ಷಿತ್ ಮಾತನಾಡಿ, ವರ್ದಂತಿ ಉತ್ಸವ ಎನ್ನುವುದು ಬಹಳ ವಿಶೇಷ ಉತ್ಸವ. ಪುರಾಣ ಪ್ರಸಿದ್ಧ ದೇವಾಲಯದಲ್ಲಿ ವರ್ದಂತಿ ಉತ್ಸವ ನಡೆಯುವುದೂ ಒಂದು ವಿಶೇಷ. ಸಂಸ್ಕೃತದಲ್ಲಿ ವರ್ದಂತಿ ಎನ್ನುತ್ತಾರೆ. ಕನ್ನಡದಲ್ಲಿ ಹುಟ್ಟುಹಬ್ಬ ಎನ್ನುತಾರೆ. ಅಮ್ಮನವರ ಹುಟ್ಟುಹಬ್ಬದ ದಿನದಂದು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಎಂದಿನಂತೆ ಬೆಳಗಿನ ಜಾವ 4.30 ರಿಂದ ಅಭ್ಯುಂಜನ ಸ್ನಾನ, ಪಂಚಾಮೃತ ಅಭಿಷೇಕ ನಡೆದಿದೆ. 9.30 ಕ್ಕೆ ಮಹಾ ಮಂಗಳಾರತಿ, 10.30 ಕ್ಕೆ ರಾಜವಂಶಸ್ಥರು ಚಿನ್ನದ ಪಲ್ಲಕ್ಕಿಗೆ ಚಾಲನೆ ಕೊಡುತ್ತಾರೆ. ಸಂಜೆ 6.30 ಯಿಂದ 7.30 ರವರೆಗೆ ಅಭಿಷೇಕ ಇರುತ್ತದೆ. 8.30 ಕ್ಕೆ ಮಹಾರಾಜರ ದರ್ಬಾರ್ ಉತ್ಸವ ಇರುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿ ಎಂದು ಮಾಹಿತಿ ನೀಡಿದರು.
Key words: Chamundeshwari Vardhanti – celebration –chamundeswari hill-devotees.