ಮೈಸೂರು,ಫೆಬ್ರವರಿ,22,2025 (www.justkannada.in): ಮೈಸೂರಿನ ಚಾಮುಂಡಿ ಬೆಟ್ಟದ ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದ ಪ್ರಕರಣ ಸಂಬಂಧ 35 ಎಕರೆ ಸಂಪೂರ್ಣ ಸುಟ್ಟು ಹೋಗಿದೆ. ಬೆಂಕಿ ಬಿದ್ದ ಕಡೆ ಚಿರತೆ ಮತ್ತು ಮರಿಗಳು ನಮ್ಮ ವಾಚರ್ ಕಣ್ಣಿಗೆ ಬಿದ್ದಿವೆ ಎಂದು ಮೈಸೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಫ್ ಬಸವರಾಜು. ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಚಾಮುಂಡಿಬೆಟ್ಟದ ಎರಡು ಕಡೆ ಏಕಕಾಲಕ್ಕೆ ಬೆಂಕಿ ಕಾಣಿಸಿಕೊಂಡಿತು. ಆ ವೇಳೆ ಗಾಳಿಯ ವೇಗ ಹೆಚ್ಚಾಗಿದ್ದರಿಂದ ಬೆಂಕಿ ವೇಗವಾಗಿ ಹಬ್ಬಿತು. ಬೆಂಕಿ ಬಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಲುಪುವುದು ಕಷ್ಟಕರವಾಗಿತ್ತು. ಇದರ ನಡುವೆಯೂ ಸತತ ಕಾರ್ಯಾಚರಣೆ ನಡೆಸಿ ಕಳೆದ ರಾತ್ರಿ 11:30ರ ಸುಮಾರಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ದನಗಾಹಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಪ್ರತಿನಿತ್ಯ ಈ ಭಾಗದಲ್ಲಿ ಜಾನುವಾರುಗಳನ್ನು ಮೇಯಿಸಲು ಬರುತ್ತಿದ್ದವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಆ ಭಾಗದಲ್ಲಿ ಹೆಚ್ಚು ಸಂಚರಿಸುತ್ತಿದ್ದವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.
ಉದ್ದೇಶ ಪೂರ್ವಕವಾಗಿ ಬೆಂಕಿ ಹಾಕಿದ್ದಾರೆ ಎಂಬ ಅನುಮಾನವಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ. ಗಾಳಿ ವೇಗ ಹಾಗೂ ಬಿಸಿಲಿನ ವಾತಾವರಣ ಇತ್ತು. ಆದ ಕಾರಣ ಬೆಂಕಿ ಹೆಚ್ಚಿತ್ತು. ನಾವು ಎಷ್ಟೇ ಪ್ರಯತ್ನ ಪಟ್ಟರೂ ಆ ಜಾಗಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸಲು ಶ್ರಮ ಹಾಕಿದರು. ಸಂಜೆ ವೇಳೆಗೆ ಬೆಂಕಿ ಕಂಟ್ರೋಲ್ ಗೆ ಬಂತು. 3 ತಂಡಗಳ ಜೊತೆಗೆ ವಾಚರ್ ಗಳನ್ನು ಇಟ್ಟು ಇಡೀ ರಾತ್ರಿ ಕಾದೀದ್ದೇವೆ. ಸದ್ಯಕ್ಕೆ ಡ್ರೋನ್ ಹಾರಿಸಿ ಎಲ್ಲವನ್ನೂ ಪರಿಶೀಲನೆ ಮಾಡಿದ್ದೇವೆ. ದೇವಿಕೆರೆ, ಗೊಲ್ಲಹಳ್ಳ, ಈ ಭಾಗದಲ್ಲಿ 35 ಎಕರೆ ಸಂಪೂರ್ಣ ಸುಟ್ಟಿದೆ. ಬೇಸಿಗೆಯಿಂದ ಒಣ ಹುಲ್ಲು ಪ್ರಮಾಣ ಜಾಸ್ತಿ ಇತ್ತು . ಅದೆಲ್ಲ ಸುಟ್ಟಿದೆ. 1516 ಎಕರೆಯಷ್ಟು ಮೀಸಲು ಅರಣ್ಯ ಪ್ರದೇಶವಿದೆ. 4 ಕಡೆ ಬೆಟ್ಟಕ್ಕೆ ಪ್ರವೇಶವಿದೆ. ಎಲ್ಲವನ್ನೂ ನಾವು ಮಾನಿಟರ್ ಮಾಡೋದು ಕಷ್ಟ. ನಾನು ಮಾಧ್ಯಮಗಳ ಮೂಲಕ ಎಲ್ಲರನ್ನೂ ಕೇಳಿಕೊಳ್ಳುತ್ತೇನೆ. ಬಿಡಿ ಸಿಗರೇಟ್ ಸೇದಿ ಎಸೆಯಬೇಡಿ. ಸಣ್ಣ ಕಿಡಿ ಇಡೀ ಕಾಡನ್ನೇ ನಾಶ ಮಾಡತ್ತೆ ಎಂದು ಡಿಸಿಎಫ್ ಬಸವರಾಜ್ ಹೇಳಿದರು.
ಚಿರತೆ ಹಾಗೂ ಮರಿಗಳು ಪ್ರತ್ಯೆಕ್ಷ
ಅದೃಷ್ಟವಶಾತ್ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ಬೆಳಿಗ್ಗೆ ನಮ್ಮ ವಾಚರ್ ಕಣ್ಣಿಗೆ ಚಿರತೆ ಹಾಗೂ ಮರಿಗಳು ಬಿದ್ದಿದೆ. ಬೆಂಕಿ ಬಿದ್ದ ತಕ್ಷಣ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಭಾಗಕ್ಕೆ ಹೋಗಿವೆ. ಹಾಗಾಗಿ ವನ್ಯ ಜೀವಿಗಳಿಗೂ ಯಾವುದೇ ಹಾನಿಯಾಗಿಲ್ಲ ಡಿಸಿಎಫ್ ಬಸವರಾಜ್ ಹೇಳಿದರು.
Key words: Chamundi Hills, fire, DCF, Basavaraju