ಮೈಸೂರು,ಜೂನ್,29,2023(www.justkannada.in): ಶ್ರೀದುರ್ಗಾ ಫೌಂಡೇಶನ್ ವತಿಯಿಂದ ಆಷಾಡ ಮಾಸದ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ವರ್ಗಕ್ಕೆ ಸೀರೆ ಬಳೆ ಅರಿಶಿನ ಕುಂಕುಮ ಬಾಗಿನ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಪುರಾಣ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಆಷಾಢ ಮಾಸದಲ್ಲಿ ಚಾಮುಂಡಿ ದೇವಿಗೆ ವಿಶೇಷ ಪ್ರಾರ್ಥನೆ ಪೂಜಾ ಕೈಂಕರ್ಯ ಸೇವೆ ಸಲ್ಲಿಸಲು ಮಹಿಳೆಯರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿನಿತ್ಯ ಸೇವೆ ಸಲ್ಲಿಸುವ ಮಹಿಳಾ ಭದ್ರತಾ ಸ್ವಚ್ಛತಾ ಸಿಬ್ಬಂದಿಗಳನ್ನ ಗೌರವಿಸಿ ಬಾಗಿನ ಸಮರ್ಪಣೆ ನೀಡುತ್ತಿರುವುದು ಅರ್ಥಪೂರ್ಣವಾದ ಆಚರಣೆ ಎಂದರು.
ನಂತರ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ, ಮಹಿಳೆಯರಲ್ಲಿ ಧರ್ಮ ಜಾಗೃತಿ ಮತ್ತು ಧಾರ್ಮಿಕ ಸಾಮರಸ್ಯದ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷದಂತೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಆಯೋಜಿಸುತ್ತಾ ಬಂದಿದ್ದೇವೆ. ಮುಂದಿನ ದಿನದಲ್ಲಿ ಮಹಿಳಾ ಸಂಘಟನೆಗಳ ಸಹಯೋಗದೊಂದಿಗೆ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಮಹಿಳಾ ಕಾರ್ಮಿಕರಲ್ಲಿ ಅರಿಶಿನ ಕುಂಕುಮದ ಮಹತ್ವ ಮತ್ತು ಪುರಾಣ ಪ್ರಸಿದ್ಧ ಹಬ್ಬಗಳ ಪರಂಪರೆ ಮತ್ತು ಆಚರಣೆಯ ಮಹತ್ವ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಈ ವೇಳೆ ಮುತ್ತಣ್ಣ, ಸಮಾಜಸೇವಕರಾದ ಕುಮಾರ್, ಕೋಲಾರ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಲತಾಬಾಯಿ ಮಾಹಡಿಕ್, ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷ ಸವಿತಾ ಘಾಟ್ಕೆ , ಶಿವು, ಶಿಕ್ಷಕರಾದ ದೀಪ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Key words: chamundi hills- women workers –bagina- Mysore.