ಬೆಂಗಳೂರು:ಆ-5:(www.justkannada.in) ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಉಪಗ್ರಹ ಭೂಮಿಯ ಮೊದಲ ಚಿತ್ರಗಳನ್ನು ರವಾನಿಸಿದೆ.ಚಂದ್ರನ ಕಕ್ಷೆಯತ್ತ ತೆರಳುತ್ತಿರುವ ಚಂದ್ರಯಾನ-2 ಉಪಗ್ರಹ ಭೂನಿಯಂತ್ರಣ ಕೇಂದ್ರವನ್ನು ತಲುಪಿದ್ದು, ಭೂಮಿಯ ಚಿತ್ರ ಕಳುಹಿಸಿದೆ.
ಈ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿದೆ. ಚಂದ್ರಯಾನ-2 ಉಪಗ್ರಹದಲ್ಲಿ ಅಳವಡಿಸಲಾಗಿರುವ ಎಲ್ಐ4 ಕ್ಯಾಮರಾ ಮೂಲಕ ಉಪಗ್ರಹವು ಆ.3ರಂದು ರವಾನಿಸಿದ್ದಾಗಿ ಇಸ್ರೋ ಟ್ವಿಟರ್ನಲ್ಲಿ ಹೇಳಿದೆ. ಭೂಮಿಯ ಸುಂದರವಾದ ಚಿತ್ರಗಳ ಮೊದಲ ಕಂತು ಇದಾಗಿದೆ ಎಂದು ಇಸ್ರೋ ಹೇಳಿಕೊಂಡಿದೆ.
ಕಳೆದ ವಾರ ಕೂಡ ಚಂದ್ರಯಾನ-2 ಉಪಗ್ರಹ ರವಾನಿಸಿದೆ ಎನ್ನಲಾದ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿತ್ತು. ಆದರೆ ಅವರು ನಕಲಿ ಎಂದು ಇಸ್ರೋ ಸ್ಪಷ್ಟಪಡಿಸಿತ್ತು. ಇದೀಗ ಚಂದ್ರಯಾನ-2 ಉಪಗ್ರಹವೇ ಭೂಮಿಯ ಮೊದಲ ಫೋಟೋ ಕಳುಹಿಸಿದೆ.
ಬಾಹುಬಲಿ ಎಂದೇ ಖ್ಯಾತವಾದ ಜಿಎಸ್ಎಲ್ವಿ ಮಾರ್ಕ್ 3 ಉಡಾವಣಾ ವಾಹನದ ಮೂಲಕ ಚಂದ್ರಯಾನ-2 ಉಪಗ್ರಹ ಜು.22ರಂದು ಯಶಸ್ವಿಯಾಗಿ ಉಡಾವಣೆಗೊಂಡಿತ್ತು. ಸದ್ಯ ಭೂ ಕಕ್ಷೆಯಲ್ಲಿ ಸುತ್ತುತ್ತಿರುವ ಅದು ಕೆಲವೇ ದಿನಗಳಲ್ಲಿ ಚಂದ್ರನ ಕಕ್ಷೆ ಪ್ರವೇಶಿಸಿ ಚಂದಮಾನನ್ನು ಸುತ್ತಲಿದೆ.