ಬಂಡಾಯದ ಬಾವುಟ ಹಾರಿಸಲು ಮುಂದಾದ ಸೈನಿಕ: ಸಿಪಿವೈ ನಡೆ ಇನ್ನೂ ನಿಗೂಢ

ಬೆಂಗಳೂರು,ಅಕ್ಟೋಬರ್,22,2024 (www.justkannada.in): ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪೈಕಿ ಚನ್ನಪಟ್ಟಣ ಕಣ ಭಾರಿ ಕುತೂಹಲ ಕೆರಳಿಸಿದ್ದು ಇತ್ತ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟಾದರೇ ಅತ್ತ ಮೈತ್ರಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್  ಸಜ್ಜಾಗಿದೆ. ಈ ಮಧ್ಯೆ  ಎಂಎಲ್ಸಿ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ ನೀಡಿದ ಬೆನ್ನಲ್ಲೆ ಚನ್ನಪಟ್ಟಣದ ಅಸಲಿ ಬೊಂಬೆ ಆಟ ಈಗ ಶುರುವಾಗಿದೆ.

ಜಿದ್ದಾಜಿದ್ದಿಗೆ ಕಾರಣವಾಗಿರುವ ಚನ್ನಪಟ್ಟಣ ಉಪ ಚುನಾವಣೆ ರಣಕಣವಾಗಿ ಮಾರ್ಪಟ್ಟಿದ್ದು , ಎನ್ ಡಿಎ ಮೈತ್ರಿ ಟಿಕೆಟ್ ಕೈತಪ್ಪುವ ಹಿನ್ನೆಲೆಯಲ್ಲಿ ಹೀಗಾಗಲೇ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿಪಿ ಯೋಗೇಶ್ವರ್ ಬಂಡಾಯ ಬಾವುಟ ಹಾರಿಸಲು ಮುಂದಾಗಿದ್ದಾರೆ. ಆದರೆ ಅವರ ಮುಂದಿನ ನಡೆ ಪಕ್ಷೇತರವಾಗಿನಾ.? ಕಾಂಗ್ರೆಸ್ ಸೇರ್ಪಡೆನಾ ? ಎಂಬುದು ಇನ್ನೂ ನಿಗೂಢವಾಗಿದೆ.

ಈ ನಡುವೆ  ಸಿಪಿ ಯೋಗೇಶ್ವರ್ ಗೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಲು ದಳಪತಿಗಳು ಆಫರ್ ನೀಡಿದ್ದರು. ಆದರೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆಗೆ ಒಪ್ಪದ ಸಿಪಿವೈ ಸ್ಪರ್ಧೆ ಮಾಡೋದಾದ್ರೆ ಎನ್ ಡಿಎ ಮೈತ್ರಿ ಅಭ್ಯರ್ಥಿಯಾಗಿ ಮಾತ್ರ ಸ್ಪರ್ಧಿಸುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.

ಹೀಗಾಗಿ ಸಿಪಿವೈ ನಡೆ ನಿಗೂಢವಾಗಿದ್ದು ಎಂಎಲ್ ಸಿ  ಸ್ಥಾನಕ್ಕೆ ರಿಸೈನ್ ಮಾಡಿದ ಬಳಿಕ  ಕಾಂಗ್ರೆಸ್ ಬಾಗಿಲು ತೆರೆದಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದು ಹೇಳಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹಾಗೆಯೇ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಸಿಪಿವೈಗೆ ಕಾಂಗ್ರೆಸ್ ನಾಯಕರು ಗಾಳ ಹಾಕುತ್ತಿದ್ದಾರೆಯೇ ? ಡಿಕೆ ಬ್ರದರ್ಸ್ ಆಪ್ತರಿಂದ  ಡೀಲ್ ನಡೆಯುತ್ತಿದೆಯಾ.? ಎಂಬ ಬಗ್ಗೆ ತಿಳಿಯಲು ಕಾದು ನೋಡಬೇಕಿದೆ. ನಾಳೆಯೇ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆಯಾಗಲಿದ್ದು, ಕೈ ಪಾಳೆಯ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಈ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಹೈ ವೋಲ್ಟೇಜ್ ಕಣವಾಗಿದ್ದು,  ಜಿದ್ದಾಜಿದ್ದಿನ ಕಣದಲ್ಲಿ ಗೆಲ್ಲುವವರು ಯಾರು?   ಸೋಲುವವರು ಯಾರು ಎಂಬ ಕುತೂಹಲ ಚನ್ನಪಟ್ಟಣದ ಜನರಲ್ಲಿ ಮೂಡಿದೆ.

Key words: Channapatna, by-election, CP Yogeshwar