ರಾಮನಗರ, ಅಕ್ಟೋಬರ್,24,2024 (www.justkannada.in): ಚನ್ನಪಟ್ಟಣ ಉಪಚುನಾವಣಾ ಅಖಾಡ ರಂಗೇರಿದ್ದು, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಲ್ಲದೆ ನಾಮಪತ್ರ ಸಲ್ಲಿಕೆಗೂ ಮುನ್ನ ಸಿಪಿ ಯೋಗೇಶ್ವರ್ ಚನ್ನಪಟ್ಟಣದ ಬಸವನಗುಡಿ ಸರ್ಕಲ್ ನಿಂದ ತಾಲೂಕು ಕಚೇರಿವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದು ಈ ಮೂಲಕ ದೋಸ್ತಿ ನಾಯಕರ ವಿರುದ್ಧ ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ರೋಡ್ ಶೋನಲ್ಲಿ ಸುಮಾರು 20ಸಾವಿರ ಕಾರ್ಯಕರ್ತರನ್ನ ಸೇರಿಸಲು ತಯಾರಿ ನಡೆಸಲಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಜಮೀರ್ ಅಹಮ್ಮದ್, ಕೃಷ್ಣ ಭೈರೇಗೌಡ, ಶಾಸಕರಾದ ಹೆಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್, ಕದಲೂರ್ ಉದಯ್, ಕುಣಿಗಲ್ ರಂಗನಾಥ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
ನಾಳೆ ನಾಮಪತ್ರ ಸಲ್ಲಿಕೆಗೆ ಕಡೇ ದಿನ: ಇನ್ನೂ ಅಂತಿಮವಾಗದ ಮೈತ್ರಿ ಅಭ್ಯರ್ಥಿ.
ನಾಳೆ ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿದೆ. ಆದೆರೆ ಚನ್ನಪಟ್ಟಣ ಅಖಾಡದಲ್ಲಿ ಮೈತ್ರಿ ಅಭ್ಯರ್ಥಿ ಇನ್ನೂ ಇನ್ನೂ ಅಂತಿಮವಾಗಿಲ್ಲ. ಸಭೆಗಳ ಮೇಲೆ ಸಭೆ ಮಾಡಿದರೂ ಅಭ್ಯರ್ಥಿ ಆಯ್ಕೆ ಗೊಂದಲ ಮುಗಿದಿಲ್ಲ.
ಜೆಡಿಎಸ್ ನಿಂದ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ನಾನಾ ತಂತ್ರ ರೂಪಿಸಲಾಗುತ್ತಿದ್ದು, ಇಂದೂ ಕೂಡಾ ನಿಖಿಲ್ ಸ್ಪರ್ಧೆಗೆ ಒತ್ತಾಯಿಸಿ ಬೃಹತ್ ಸಭೆ ನಡೆಸಲಾಗುತ್ತಿದೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ ಚನ್ನಪಟ್ಟಣ ಕಾರ್ಯಕರ್ತರು, ಮುಖಂಡರ ಸಭೆ ನಡೆಯಲಿದ್ದು ಇಂದು ಮೈತ್ರಿ ಅಭ್ಯರ್ಥಿ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.
ನಾಳೆ ನಾಮಪತ್ರ ಸಲ್ಲಿಸಲು ಜೆಡಿಎಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಈ ವೇಳೆ ಶಾಸಕರು, ಮಾಜಿ ಶಾಸಕರು, ಮುಖಂಡರ ಅಭಿಪ್ರಾಯವನ್ನು ಹೆಚ್ ಡಿ ಕುಮಾರಸ್ವಾಮಿ ಪಡೆಯಲಿದ್ದಾರೆ.
Key words: Channapatna, by-election, CP Yogeshwar, nomination