ಧಾರವಾಡ, ಸೆಪ್ಟೆಂಬರ್,8, 2022 (www.justkannada.in): ಧಾರವಾಡ ಜಿಲ್ಲಾ ಗ್ರಾಹಕರ ಕುಂದುಕೊರತೆ ಪರಿಹಾರ ವೇದಿಕೆಯು, ಕನ್ನಡದಲ್ಲಿ ಬರೆಯಲಾಗಿದೆ ಎಂಬ ಕಾರಣದಿಂದಾಗಿ ಚೆಕ್ ಅನ್ನು ಪುರಸ್ಕರಿಸದೆ, ತಿರಸ್ಕರಿಸಿದಂತಹ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಶಾಖೆಯ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ರೂ.85,711 ರೂ. ದಂಡ ವಿಧಿಸಿದೆ.
ಹುಬ್ಬಳ್ಳಿಯ ರಾಜನಗರದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ವಾದಿರಾಚಾರ್ಯ ಇನಾಂದಾರ್ ಎನ್ನುವವರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಹಕರ ವೇದಿಕೆ, ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಸಹ ಕೇವಲ ರೂ.೬,೦೦೦ ಮೌಲ್ಯದ ಚೆಕ್ ಅನ್ನು ಕನ್ನಡದಲ್ಲಿ ಬರೆಯಲಾಗಿದೆ ಎಂಬ ಕಾರಣಕ್ಕಾಗಿ ಬ್ಯಾಂಕ್ ತಿರಸ್ಕರಿಸಿದೆ ಎಂದು ತಿಳಿಸಿದೆ.
ವೇದಿಕೆಯ ಅಧ್ಯಕ್ಷ ಇಶಪ್ಪ ಭುಟೆ, ಸದಸ್ಯರಾದ ವಿ.ಎ. ಬೋಳಿಶೆಟ್ಟಿ ಹಾಗೂ ಪಿ.ಸಿ. ಹಿರೇಮಠ್ ಅವರು ಸೆಪ್ಟೆಂಬರ್ 7 ರಂದು ನೀಡಿದ ತಮ್ಮ ಆದೇಶದಲ್ಲಿ ಬ್ಯಾಂಕ್ ರೂ.೮೫,೧೭೭ ಅನ್ನು ಪರಿಹಾರ ಹಾಗೂ ದಂಡದ ರೂಪದಲ್ಲಿ ಪಾವತಿಸಬೇಕು ಎಂದು ನಿರ್ದೇಶಿಸಿದೆ. ಬ್ಯಾಂಕುಗಳಲ್ಲಿನ ತ್ರಿಭಾಷಾ ನೀತಿಯಡಿ ಪ್ರಾದೇಶಿಕ ಭಾಷೆಗಳ ಬಳಕೆಗೆ ಅನುಮತಿ ಇದ್ದು ಈ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವವನ್ನು ಪಡೆದುಕೊಂಡಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಈ ಸಂಬಂಧ ಮಾತನಾಡಿ ಈ ತೀರ್ಪು ಪೂರ್ವನಿರ್ದಶನವಾಗಬಹುದು. “ಪಿಎಸ್ ಯುಗಳು (ಸಾರ್ವಜನಿಕ ವಲಯದ ಕಂಪನಿಗಳು) ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು ಪ್ರಾದೇಶಿಕ ಭಾಷೆಗಳನ್ನು ಗೌರವಿಸುವುದಿಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ದೂರುದಾರರಾದ ವಾದಿರಾಜಾಚಾರ್ಯ ಅವರು, “ನಾನು ಆಂಗ್ಲ ಭಾಷಾ ಉಪನ್ಯಾಸಕನಾಗಿದ್ದರೂ ಸಹ ಕನ್ನಡ ಆಡಳಿತ ಭಾಷೆಯಾಗಿದೆ. ಕನ್ನಡಿಗರಾಗಿ ಕನ್ನಡವನ್ನು ಬಳಸುವುದು ನಮ್ಮೆಲ್ಲರ ಕರ್ತವ್ಯ,” ಎಂದರು.
ಧಾರವಾಡದ ಜಿಲ್ಲಾಧಿಕಾರಿ ಗುರುದತ್ ಹೆಗ್ಡೆ ಅವರು ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡದ ಜ್ಞಾನ ಇಲ್ಲದಿರುವಂತಹವರನ್ನು ಬ್ಯಾಂಕುಗಳು ಕರ್ತವ್ಯಕ್ಕೆ ನಿಯೋಜಿಸಿರುವ ಸಮಸ್ಯೆ ಕುರಿತೂ ಪ್ರಸ್ತಾಪಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: check – Kannada -not – Receive- SBI – Rs. 85 thousand -fine