ಮೈಸೂರು, ನವೆಂಬರ್ 01, 2020 (www.justkannada.in): ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ, ಇನ್ನು ವಿಜ್ಞಾನ ವಿಷಯವಂತೂ ಕೇಳುವಂತೆಯೇ ಇಲ್ಲ ! ಇದನ್ನು ಮನಗಂಡು ಪಿಯುಸಿ ವಿದ್ಯಾರ್ಥಿಗಳ ನೆರವಿಗೆ ಮೈಸೂರು ಜಿಲ್ಲೆಯ ರಸಾಯನ ಶಾಸ್ತ್ರ ಉಪನ್ಯಾಸಕರು ಧಾವಿಸಿದ್ದಾರೆ. ಕನ್ನಡದಲ್ಲೇ ರಸಾಯನ ಶಾಸ್ತ್ರ ಪಾಠ ಮಾಡುತ್ತಿದ್ದಾರೆ.
ಸದ್ಯ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ತರಗತಿಗಳು ಆನ್ ಲೈನ್ ಗೆ ಸೀಮಿತವಾಗಿದೆ. ಇಂತಹ ಕಷ್ಟದ ಸಮಯದಲ್ಲಿ ಇಂಗ್ಲಿಷ್ ನಲ್ಲಿ ವಿಜ್ಞಾನ ವಿಷಯವನ್ನು ಅರ್ಥ ಮಾಡಿಕೊಂಡು ಪರೀಕ್ಷೆಗೆ ತಯಾರಿ ನಡೆಸುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಷ್ಟದ ಕೆಲಸ. ಇದನ್ನು ಮನಗಂಡಿರುವ ಮೈಸೂರು ಜಿಲ್ಲಾ ಪದವಿಪೂರ್ವ ರಸಾಯನ ಶಾಸ್ತ್ರ ಉಪನ್ಯಾಸಕರ ವೇದಿಕೆ ಯೂ ಟ್ಯೂಬ್ ಮೂಲಕ ಮಕ್ಕಳ ನೆರವಿಗೆ ಬಂದಿದೆ.
ಯೂ ಟ್ಯೂಬ್ ಚಾನೆಲ್ ಮೂಲಕ ರಸಾಯನ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಪಾಠ-ಪ್ರವಚನಗಳನ್ನು ನೀಡಲಾಗುತ್ತಿದೆ. ತರಗತಿಯ ಪಾಠ-ಪ್ರವಚನಗಳನ್ನು ಚಿತ್ರೀಕರಿಸಿ ಅದನ್ನು ಯೂ ಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಇನ್ನು ರಸಾಯನ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ನೋಟ್ಸ್, ಪ್ರಶ್ನೆ ಪತ್ರಿಕೆ, ಅಸೈನ್ ಮೆಂಟ್ಸ್ ಗಳನ್ನು ನೀಡಲಾಗುತ್ತಿದೆ. ಜತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ (www.mypuchemistry.in) ವೆಬ್ ಸೈಟ್ ಪ್ರಾರಂಭಿಸಲಾಗಿದೆ. ಇದರಲ್ಲಿ ಮಕ್ಕಳಿಗೆ ಅಸೈನ್ ಮೆಂಟ್ ನೀಡಲಾಗುತ್ತಿದೆ.
ಅಕ್ಟೋಬರ್ 07ರಿಂದ ಯೂ ಟ್ಯೂಬ್ ನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ರಸಾಯನ ಶಾಸ್ತ್ರ ವಿಷಯದ ಹಲವು ಅಧ್ಯಾಯಗಳನ್ನು ವೀಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಇದಕ್ಕೆ ಮೈಸೂರು ಜಿಲ್ಲೆಯ ಎಲ್ಲ ರಸಾಯನ ಶಾಸ್ತ್ರ ಉಪನ್ಯಾಸಕರು ಕೈ ಜೋಡಿಸಿದ್ದರೆ. 2ನೇ ಹಂತದಲ್ಲಿ ದ್ವಿತೀಯ ಪಿಯು ಪಠ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡುತ್ತಾರೆ ಮೈಸೂರು ಜಿಲ್ಲಾ ಪದವಿಪೂರ್ವ ರಸಾಯನ ಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಎನ್.ಎ.ನಜೀಮ್ ಉದ್ದೀನ್.
ರಸಾಯನ ಶಾಸ್ತ್ರ ವಿಷಯ ಮಾತ್ರವಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೀಟ್, ಸಿಇಟಿ ಜೆಇಇ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ನೆರವಾಗುವಂತಹ ವೀಡಿಯೋ ತರಗತಿಗಳನ್ನು ಯೂ ಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷೆ ಬರೆಯುವ ವಿಧಾನ, ಸ್ಟಡಿ ಸ್ಕಿಲ್ ಗಳನ್ನು ಹೇಳಿಕೊಡಲಾಗುತ್ತಿದೆ. ಸಾಕಷ್ಟು ಅನುಭವವಿರುವ ನುರಿತ ಉಪನ್ಯಾಸಕರು ವೇದಿಕೆಯಲ್ಲಿದ್ದು ಎಲ್ಲರೂ ಸೇವಾ ಮನೋಭಾವದಿಂದ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ಮೈಸೂರು ಜಿಲ್ಲಾ ಪದವಿಪೂರ್ವ ರಸಾಯನ ಶಾಸ್ತ್ರ ಉಪನ್ಯಾಸಕರ ವೇದಿಕೆ ಕಾರ್ಯದರ್ಶಿ ಸಿ.ಶ್ರೀನಿವಾಸ ಬಾಬು ‘ಜಸ್ಟ್ ಕನ್ನಡ’ಕ್ಕೆ ತಿಳಿಸಿದ್ದಾರೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಯೂ ಟ್ಯೂಬ್ ನಲ್ಲಿ my pu chemistry (shorturl.at/ouEK2) ಚಾನೆಲ್ ಗೆ ಸಬ್ಸ್ಕೈಬ್ ಆಗಿ ಹೆಚ್ಚಿನ ಅನುಕೂಲ ಪಡೆಯಬಹುದಾಗಿದೆ. ಜತೆಗೆ www.mypuchemstiry.in ಗೆ ಭೇಟಿ ನೀಡಿ ಹೆಚ್ಚಿನ ಅನುಕೂಲ ಪಡೆಯಬಹುದಾಗಿದೆ. ಜಿಲ್ಲೆಯ ಎಲ್ಲ ರಸಾಯನ ಶಾಸ್ತ್ರ ಉಪನ್ಯಾಸಕರು ವೇದಿಕೆ ಸದಸ್ಯರಾಗಿರುವುದರಿಂದ ಅವರ ಕಾಲೇಜಿನ ಎಲ್ಲ ಮಕ್ಕಳಿಗೆ ಇದರ ಮಾಹಿತಿ ನೀಡಿ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ ಎಂದು ಶ್ರೀನಿವಾಸ ಬಾಬು ಮಾಹಿತಿ ನೀಡಿದ್ದಾರೆ.
ಭೇಟಿ ನೀಡಿ: ಯೂ ಟ್ಯೂಬ್: www.youtube.com (my pu chemistry)
ವೆಬ್ ಸೈಟ್: www.mypuchemstiry.in