ಬೆಂಗಳೂರು,ಆಗಸ್ಟ್,29,2024 (www.justkannada.in): ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ತರಾತುರಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ದ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಛಲವಾದಿ ನಾರಾಯಣಸ್ವಾಮಿ ಶೆಡ್ ಗಿರಾಕಿ. ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಿಷ್ಟು..
ಕಳೆದ ಕೆಲವು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಕ್ರಿಯರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ದೇವನಹಳ್ಳಿ ಸಮೀಪದ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆಯಷ್ಟು ಸಿ.ಎ. ನಿವೇಶನ ಕೊಟ್ಟಿರುವುದು ವಿನಾ ಕಾರಣ ಸುದ್ದಿಯಾಗುತ್ತಿದೆ. ಇದು ನಿಮಗೆಲ್ಲ ಗೊತ್ತಿದೆ. ಇದಕ್ಕೆ ಮೊದಲು ವಿವಾದದ ಬಣ್ಣ ಹಚ್ಚಿದ್ದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಅವರು. ನಾನು ಅವರನ್ನು ವಿವೇಕಶಾಲಿಗಳು ಎಂದುಕೊಂಡಿದ್ದೆ. ಆದರೆ, ಅಂತಹ ಹಿರಿಯರು ಕಾನೂನುಬದ್ಧವಾಗಿ ನಡೆದಿರುವ ಒಂದು ಸಿ.ಎ. ನಿವೇಶನದ ಹಂಚಿಕೆಗೆ ರಾಜಕೀಯ ಲೇಪ ಹಚ್ಚಿದ್ದು ವಿಷಾದದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರ ಬೆನ್ನಲ್ಲೇ ಬಿಜೆಪಿ ತನ್ನ ದಲಿತ ಮುಖಂಡ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಅಖಾಡಕ್ಕೆ ತಳ್ಳಿದೆ. ಇದು ಒಬ್ಬ ದಲಿತನ ವಿರುದ್ಧ ಇನ್ನೊಬ್ಬ ದಲಿತನನ್ನೇ ಕಣಕ್ಕೆ ನೂಕುವ ಬಿಜೆಪಿಯ ತಂತ್ರದ ಭಾಗ. ಏಕೆಂದರೆ, ಇಬ್ಬರು ದಲಿತರು ಹೊಡೆದಾಡುತ್ತಿದ್ದರೆ ಆರೆಸ್ಸೆಸ್ ಮತ್ತು ಬಿಜೆಪಿಗೆ ಲಾಭ! ಈಗ ನಡೆಯುತ್ತಿರುವುದು ಇಂತಹ ಒಂದು ಪಿತೂರಿ. ಆದರೆ ಛಲವಾದಿ ನಾರಾಯಣಸ್ವಾಮಿ ಆತ್ಮಾವಲೋಕನವನ್ನೂ ಮಾಡಿಕೊಳ್ಳದೆ ಬಿಜೆಪಿಯ ಪಟ್ಟಭದ್ರ ಹಿತಾಸಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಹರಿಹಾಯ್ದರು.
ಈಗ ಖರ್ಗೆ ಅವರ ಮಗ ರಾಹುಲ್ ಖರ್ಗೆ ನಡೆಸುತ್ತಿರುವ ಟ್ರಸ್ಟ್ ವಿಚಾರಕ್ಕೆ ಬರೋಣ. ಮೂಲತಃ ರಾಹುಲ್ ಖರ್ಗೆಯವರು ಎಂಜಿನಿಯರಿಂಗ್ ಪದವೀಧರರು, ಐಐಎಸ್ಸಿ ಯಲ್ಲಿ ತರಬೇತಿ ಪಡೆದಿದ್ದಾರೆ. ಅವರಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಹಲವು ವರ್ಷಗಳಿಂದಲೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ನಾವು ಇದನ್ನು ಎಸ್ಸಿ-ಎಸ್ಟಿ ಅಂತೆಲ್ಲ ನೋಡುವುದು ಬೇಡ. ಖರ್ಗೆ ಅವರ ಕುಟುಂಬವು ಇದನ್ನೆಲ್ಲ ಮೀರಿದೆ. ಈ ಟ್ರಸ್ಟ್ ಪರವಾಗಿ ಖರ್ಗೆಯವರು ಉತ್ಕೃಷ್ಟತಾ ಕೇಂದ್ರ, ತರಬೇತಿ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಈ ಮೂರನ್ನೂ ಮಾಡುವುದಾಗಿ ಹೇಳಿ, ಏರೋಸ್ಪೇಸ್ ಪಾರ್ಕಿನಲ್ಲಿ ಸಿ.ಎ. ನಿವೇಶನಕ್ಕೆ ನಿಯಮಾನುಸಾರವೇ ಅರ್ಜಿ ಹಾಕಿದ್ದು ನಿಜ. ಇದರಲ್ಲಿ ತಪ್ಪೇನೂ ಇಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದರು.
ಈ ನಿವೇಶನಕ್ಕಾಗಿ ಒಟ್ಟು 6 ಅರ್ಜಿ ಬಂದಿದ್ದವು. ಇದರಲ್ಲಿ 3 ಅರ್ಜಿಗಳು ವಸತಿ ಸಮುಚ್ಚಯ ನಿರ್ಮಾಣಕ್ಕೆ ಅನುಮತಿ ಕೋರಿದ್ದವು. ಆದರೆ ಇಲ್ಲಿ ಈಗಾಗಲೇ ವಸತಿ ಯೋಜನೆಗೆ ಅನುಮತಿ ನೀಡಿದ್ದರಿಂದ ಈ ಅರ್ಜಿಗಳನ್ನು ನಾವು ಪುರಸ್ಕರಿಸಲಿಲ್ಲ. ಇನ್ನೊಂದು ಅರ್ಜಿಯಲ್ಲಿ ಆಸ್ಪತ್ರೆ ನಿರ್ಮಿಸುವ ಉದ್ದೇಶವನ್ನು ತಿಳಿಸಲಾಗಿತ್ತು. ಆದರೆ ಅಗತ್ಯ ದಾಖಲೆಗಳನ್ನು ಲಗತ್ತಿಸಿರಲಿಲ್ಲ. 5ನೆಯ ಅರ್ಜಿಯಲ್ಲಿ ಕೇವಲ `ಸಂಶೋಧನೆ’ ಅಂತ ತಮ್ಮ ಉದ್ದೇಶ ನಮೂದಿಸಲಾಗಿತ್ತು. ಹೀಗಾಗಿ ಈ ಅರ್ಜಿಗಳೂ ತಿರಸ್ಕೃತವಾದವು. ಆಗ ಕೊನೆಗೆ ಉಳಿದಿದ್ದು ರಾಹುಲ್ ಖರ್ಗೆ ಅವರ ಅರ್ಜಿ ಮಾತ್ರ. ಇವರು ಸಂಶೋಧನೆ, ತರಬೇತಿ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವುದಾಗಿ ಸ್ಪಷ್ಟವಾಗಿ ನಮೂದಿಸಿದ್ದರು. ವಸ್ತುಸ್ಥಿತಿ ಹೀಗಿದ್ದಾಗ ನಾವು ಮೆರಿಟ್ ಆಧರಿಸಿಯೇ ರಾಹುಲ್ ಖರ್ಗೆ ಅವರ ಟ್ರಸ್ಟಿಗೆ ಸಿ.ಎ. ನಿವೇಶನ ಕೊಟ್ಟಿದ್ದೇವೆ. ಇದನ್ನು ಗಮನಿಸದೆ ಬಿಜೆಪಿಯವರು ಇಲ್ಲಿ ರಾಜಕೀಯ ಮಾಡುವ ಆತುರದಲ್ಲಿದ್ದಾರೆ. ನಾವೂ ಸಹ ಅವರಂತೆಯೇ ಬಿಜೆಪಿ ನಾಯಕರ ಜಾತಕ ತೆಗೆದರೆ, ಇವರೆಲ್ಲರ ಬಣ್ಣ ಬಯಲಾಗುತ್ತದೆ. ಖರ್ಗೆಯವರ ಟ್ರಸ್ಟಿಗೆ ನಾವು ಸಿ.ಎ. ನಿವೇಶನವನ್ನು ಮೆರಿಟ್ ಮತ್ತು ನಿಯಮಗಳಿಗೆ ಅನುಸಾರವಾಗಿಯೇ ಕೊಟ್ಟಿದ್ದೇವೆ. ಇದರಲ್ಲಿ ನಿಯವೇನೂ ಉಲ್ಲಂಘನೆ ಆಗಿಲ್ಲ. ಜೊತೆಗೆ, ಈ ನಿವೇಶನದ ಬೆಲೆಯಲ್ಲಿ ಅವರಿಗೆ ಯಾವ ರಿಯಾಯಿತಿಯನ್ನೂ ಕೊಟ್ಟಿಲ್ಲ. ಇವೆಲ್ಲವೂ ಸಂಪೂರ್ಣ ಪಾರದರ್ಶಕವಾಗಿಯೇ ನಡೆದಿದೆ ಎಂದು ಎಂ.ಬಿ ಪಾಟೀಲ್ ವಿವರಿಸಿದರು.
ನಾರಾಯಣಸ್ವಾಮಿ ಅವರು ಒಂದು ಸಲ ದಲಿತರಿಗೆ ಕೊಡುವ ಸಿ.ಎ. ನಿವೇಶನಗಳಿಗೆ ಏಕೆ ಶೇ 75ರಷ್ಟು ರಿಯಾಯಿತಿ ಕೊಡಲಿಲ್ಲ ಎನ್ನುತ್ತಾರೆ. ಇನ್ನೊಂದು ಸಲ ಖರ್ಗೆಯವರಿಗೆ ಏಕೆ ಕೊಟ್ಟಿದ್ದು ಅಂತಲೂ ಕೇಳುತ್ತಾರೆ. ಮತ್ತೊಮ್ಮೆ `ಈ ನಿವೇಶನಗಳನ್ನೇಕೆ ಹರಾಜು ಹಾಕಲಿಲ್ಲ?’ ಎನ್ನುತ್ತಾರೆ. ನಂತರ 500 ಕೋಟಿ ನಷ್ಟ ಆಗಿದೆ ಅಂತಾರೆ. ಇಂತಹ ಹಾಸ್ಯಾಸ್ಪದ ಮಾತುಗಾರಿಕೆಯನ್ನಂತೂ ನಾನು ಇದುವರೆಗೂ ನೋಡಿಲ್ಲ ಎಂದು ಎಂ.ಬಿ ಪಾಟೀಲ್ ಲೇವಡಿ ಮಾಡಿದರು.
ಮೊದಲನೆಯದಾಗಿ, ನಿಯಮಗಳ ಪ್ರಕಾರ ಸಿ.ಎ. ನಿವೇಶನಗಳ ಬೆಲೆಯಲ್ಲಿ ರಿಯಾಯಿತಿ ನೀಡಲು ಅವಕಾಶವಿಲ್ಲ. ನಾವು ಇದಕ್ಕೆ ತಕ್ಕಂತೆ ನಡೆದುಕೊಂಡಿದ್ದೇವೆ. ಎರಡನೆಯದಾಗಿ, ಕೈಗಾರಿಕಾ ನಿವೇಶನಗಳಲ್ಲಿ ದಲಿತರಿಗೆ ಶೇಕಡ 75ರಷ್ಟು ಸಬ್ಸಿಡಿಯೊಂದಿಗೆ, ಶೇಕಡ 24.10ರಷ್ಟು ಮೀಸಲಾತಿಯನ್ನು ನಮ್ಮ ಸರಕಾರ ಬಂದ ಮೇಲೆ ಕಡ್ಡಾಯಗೊಳಿಸಿದೆ. ಈ ಸಂಬಂಧದ ಆದೇಶವನ್ನು ನಾವು 5-2-2024ರಂದು ಹೊರಡಿಸಿದ್ದೇವೆ. ದೊಡ್ಡ ಗಂಟಲಿನಲ್ಲಿ ಮಾತನಾಡುತ್ತಿರುವ ನಾರಾಯಣಸ್ವಾಮಿಗೆ ಈ ಸರಳ ಸತ್ಯದ ಅರಿವು ಇರಬೇಕಾಗಿತ್ತು.
ಉಗ್ರಾಣ ಕಟ್ಟುವ ಯೋಗ್ಯತೆ ಇಲ್ಲದವರು ಖರ್ಗೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ- ಛಲವಾದಿ ನಾರಾಯಣಸ್ವಾಮಿಗೆ ಟಾಂಗ್
ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ದ ವಾಗ್ದಾಳಿ ಮುಂದುವರೆಸಿದ ಎಂ.ಬಿ ಪಾಟೀಲ್, ಖರ್ಗೆ ಕುಟುಂಬದ ವಿರುದ್ಧ ಚೀರಾಡುತ್ತಿರುವ ಛಲವಾದಿ ನಾರಾಯಣಸ್ವಾಮಿ ಕೂಡ 19-7-2006ರಂದು ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ (ಇದು ವಾಸ್ತವವಾಗಿ ಮಂಡ್ಯ ಜಿಲ್ಲೆಯಲ್ಲಿ ಬರುತ್ತೆ- ಕೆ.ಆರ್. ರಸ್ತೆ) ನಿವೇಶನ ಸಂಖ್ಯೆ 57-ಪಿ1 ಇಲ್ಲಿ ಎರಡು ಎಕರೆ (8,029 ಚದರ ಮೀಟರ್) ಜಮೀನನ್ನು ಪಡೆದುಕೊಂಡಿದ್ದಾರೆ. ಮೊದಲು ಅವರು ಇಲ್ಲಿ `ಬೃಂದಾವನ ಸಾಫ್ಟ್ವೇರ್ ಟೆಕ್ನಾಲಜೀಸ್’ ಎನ್ನುವ ಹೆಸರಿನ ಉದ್ಯಮ ಸ್ಥಾಪಿಸುತ್ತೇವೆ ಎಂದು ಹೇಳಿದ್ದರು. ಆದರೆ ಅಂತಹ ಕಂಪನಿ ಏನಾಯ್ತೋ ನಾರಾಯಣಸ್ವಾಮಿಯೇ ಹೇಳಬೇಕು.
ಇದಾದ ಬಳಿಕ ಅಲ್ಲಿ ರೆಡಿಮೇಡ್ ಗಾರ್ಮೆಂಟ್ಸ್ ಘಟಕ ಶುರು ಮಾಡುತ್ತೇವೆ ಎಂದರು. ಈ ಸಂಬಂಧದ ಭೂಮಿ ಹಂಚಿಕೆ 21-07-2006ರಂದು ನಡೆದಿದ್ದು, 22-2-2008ರಂದು ಅವರಿಗೆ ಸ್ವಾಧೀನ ಪತ್ರ ನೀಡಲಾಗಿದೆ. 13-12-2010ರಲ್ಲಿ ಈ ಸಂಬಂಧ ಗುತ್ತಿಗೆ ಕರಾರನ್ನೂ ನೆರವೇರಿಸಲಾಗಿದೆ. ನಾರಾಯಣಸ್ವಾಮಿ ಇದನ್ನು ಪಡೆದುಕೊಂಡಾಗ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇತ್ತಲ್ಲವೇ? ವಿಚಿತ್ರವೆಂದರೆ, ಅವರು ಗಾರ್ಮೆಂಟ್ಸ್ ಕೂಡ ಶುರು ಮಾಡಲಿಲ್ಲ. ಆಮೇಲೆ, ನಾರಾಯಣಸ್ವಾಮಿಯವರಿಗೆ ಉಗ್ರಾಣವನ್ನು ಶುರು ಮಾಡುವ ಕನಸು ಬೀಳತೊಡಗಿತು. ಇದಕ್ಕೆ 26-7-2014ರಂದು ಅನುಮೋದನೆಯನ್ನು ಕೂಡ ಕೊಡಲಾಗಿದೆ. ಆದರೆ ಇದು ಕೂಡ ದಡ ಹತ್ತಲಿಲ್ಲ. ಅವರು ಕಾಲಕಾಲಕ್ಕೆ ಕಂಪನಿಯ ಹೆಸರುಗಳನ್ನು ಬದಲಾಯಿಸಿದ್ದೊಂದೇ ಸಾಧನೆ! 2006ರಲ್ಲಿ ಪಡೆದುಕೊಂಡ ಜಮೀನಿನಲ್ಲಿ ನಾರಾಯಣಸ್ವಾಮಿಯವರು 2016ರವರೆಗೂ ಯಾವ ಕೈಗಾರಿಕಾ ಚಟುವಟಿಕೆಯನ್ನೂ ಆರಂಭಿಸಲಿಲ್ಲ. ಹೀಗಾಗಿ, ನಿಯಮಾವಳಿಯ ಪ್ರಕಾರ ಸರಕಾರವು 11-11-2016ರಂದು ಈ ಜಮೀನನ್ನು ವಾಪಸ್ ಪಡೆದುಕೊಳ್ಳಲು ಆದೇಶಿಸಿತು.
ಈಗ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿರುವ ನಾರಾಯಣಸ್ವಾಮಿ ಆಗ ಇದರ ವಿರುದ್ಧ ಹೈಕೋರ್ಟಿನ ಮೆಟ್ಟಿಲೇರಿದರು! ಇದನ್ನು ಅವರು ಜ್ಞಾಪಿಸಿಕೊಳ್ಳಬೇಕು. ಇದರಿಂದ ಅವರಿಗೂ ಕ್ಷೇಮ, ರಾಜ್ಯಕ್ಕೂ ಕ್ಷೇಮ. ಇವರ ರಿಟ್ ಅರ್ಜಿ ಪುರಸ್ಕರಿಸಿದ ಘನ ನ್ಯಾಯಾಲಯವು 29-8-2017ರಂದು ತಡೆಯಾಜ್ಞೆ ನೀಡಿತು. ಆಮೇಲೆ 7-7-2022ರಂದು ನ್ಯಾಯಾಲಯವು ಈ ಪ್ರಕರಣದ ವಿಲೇವಾರಿ ಮಾಡಿದೆ. ಇದಾದ ಮೇಲೂ ನಾರಾಯಣಸ್ವಾಮಿಯವರಿಗೆ ಕೈಗಾರಿಕಾ ಚಟುವಟಿಕೆ ಆರಂಭಿಸಲು 7-11-2022ರಿಂದ 6-5-2023ರವರೆಗೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ನಾರಾಯಣಸ್ವಾಮಿಯವರು ರಾಜಕಾರಣದಲ್ಲಿ ಮುಳುಗಿದ್ದರಿಂದ ಈ ಕಡೆ ಗಮನ ಹರಿಸುವಷ್ಟು ಕಾಲಾವಕಾಶ ಅವರಿಗೆ ಇನ್ನೂ ಸಿಕ್ಕಿಲ್ಲ.
ಇಷ್ಟಕ್ಕೂ ಇವರಿಗೆ ಹಂಚಿಕೆ ಮಾಡಿದ್ದ ಎರಡು ಎಕರೆಯಲ್ಲಿ ಕನಿಷ್ಠ ಶೇ 50ರಷ್ಟಾದರೂ ಅಭಿವೃದ್ಧಿ ಪಡಿಸಿ, ಬಳಕೆ ಮಾಡಬೇಕು. ಇದು ನಿಯಮ. ಆದರೆ ನಾರಾಯಣಸ್ವಾಮಿ ಅವರು ಬಳಕೆ ಮಾಡಿರುವುದು ಶೇ 5ರಷ್ಟು ಮಾತ್ರ. ಒಂದು ಶೆಡ್ ಕಟ್ಟಿ ಬಾಡಿಗೆಗೆ ಇದೆ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಷ್ಟು ಬಿಟ್ರೆ ಏನೂ ಆಗಿಲ್ಲ. ಈ ಘನಾಂಧಾರಿ ಕೆಲಸಕ್ಕಾ ಇವರಿಗೆ ಜಾಗ ಕೊಟ್ಟಿದ್ದು? ಇದರಿಂದ ಯಾರಿಗೆ ಏನು ಪ್ರಯೋಜನ ಆಯಿತು?
ಇಂತಹ ವ್ಯಕ್ತಿಗೆ ಕಾಂಗ್ರೆಸ್ ಮತ್ತು ಖರ್ಗೆ ಕುಟುಂಬದ ವಿರುದ್ಧ ಮಾತನಾಡಲು ಯಾವ ನೈತಿಕ ಹಕ್ಕಿದೆ? ನೀತಿ ಪಾಠ ಹೇಳುವ ಇವರು 2006ರಿಂದ ಇಲ್ಲಿಯವರೆಗೂ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ? ಎಷ್ಟು ಹೂಡಿಕೆ ಮಾಡಿದ್ದಾರೆ? ಹಾಗಾದರೆ ಇವರು ನಿವೇಶನ ತೆಗೆದುಕೊಂಡಿದ್ದಾದರೂ ಏಕೆ? ರಿಯಲ್ ಎಸ್ಟೇಟ್ ದಂಧೆ ಮಾಡುವುದಕ್ಕೇ? ಹೋಗಲಿ ಕೈಗಾರಿಕೆ ಮಾಡಲು ಇವರಿಗೆಲ್ಲಿತ್ತು ಪ್ರಾವೀಣ್ಯತೆ ? ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ ಇವರ ರೀತಿ ರಾಹುಲ್ ಖರ್ಗೆಯವರು ಜಮೀನು ತೆಗೆದುಕೊಂಡು ವರ್ಷಾನುಗಟ್ಟಲೆ ಸುಮ್ಮನೆ ಕೂರಲ್ಲ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತೇನೆ.
ಒಂದಂತೂ ಹೇಳುತ್ತೇನೆ ಇವತ್ತು ನಾರಾಯಣಸ್ವಾಮಿ ಅವರು ರಾಜಕೀಯವಾಗಿ ಈ ಸ್ಥಾನಕ್ಕೆ ಬಂದಿದ್ದಾರೆ ಅಂದರೂ ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಕಾರಣ ಎಂಬುದನ್ನು ಮರೆಯಬಾರದು. ಖರ್ಗೆ ಅವರು ರೈಲ್ವೆ ಸಚಿವರಿದ್ದಾಗ ಇದೇ ನಾರಾಯಣ ಸ್ವಾಮಿ ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕರನ್ನಾಗಿ ಮಾಡಲಾಯಿತು. ಇವರಿಗೆ ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದವರು. ಆದರೂ ತಿಂದ ಮನೆಗೆ ಮೂರು ಬಗೆದು, ಖರ್ಗೆ ಬಗ್ಗೆ ಮಾತನಾಡಿದರೆ ಬಿಜೆಪಿ ಯಲ್ಲಿ ಇನ್ನೂ ಉನ್ನತ ಸ್ಥಾನ ಪಡೆಯಬಹುದು ಅಂದುಕೊಂಡು ಸುಳ್ಳು ಆರೋಪ ಮಾಡುತ್ತಿದ್ದಾರೆ. ಖರ್ಗೆ ಅವರಿಗೆ ಇಡೀ ಜೀವನ ಪರ್ಯಂತ ನಾರಾಯಣಸ್ವಾಮಿ ಋಣಿಯಾಗಿರಬೇಕು.
ರಾಹುಲ್ ಖರ್ಗೆ ಅವರು ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಪದವೀಧರರು. ಐಐಎಸ್ ಸಿ ಯಲ್ಲಿ ತರಬೇತಿ ಪಡೆದಿದ್ದಾರೆ. ಯುಪಿಎಸ್ ಸಿ ಪರೀಕ್ಷೆ ಯನ್ನು ಎರಡು ಬಾರಿ ಉತ್ತೀರ್ಣರಾಗಿದ್ದಾರೆ. ಅವರು ನಾರಾಯಣಸ್ವಾಮಿ ರೀತಿಯ ಶೆಡ್ ಗಿರಾಕಿ ಅಲ್ಲ. ಉಗ್ರಾಣ ಕಟ್ಟುವ ಯೋಗ್ಯತೆ ಇಲ್ಲದವರು ಖರ್ಗೆ ಬಗ್ಗೆ ಮಾತನಾಡುತ್ತಾರೆ. ಇನ್ನೂ ಕೊಟ್ಟಿದ್ದ ಜಮೀನು ಬಳಕೆ ಮಾಡಿಲ್ಲ. ಆಗಲೇ ಶುದ್ದ ಕ್ರಯ ಪತ್ರ ಕೊಡಿ ಅಂತಿದ್ದಾರೆ. ಇವರು ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಹರಿಹಾಯ್ದರು.
Key words: Chhalavadi Narayanaswamy, Kharge, trust, M. B Patil