ಬೆಂಗಳೂರು:ಜೂ-9:(www.justkannada.in) ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ತಮ್ಮ ಮಗಳ ವಿವಾಹಕ್ಕೆ ಕೇವಲ ಒಂದು ದಿನ ರಜೆ ತೆಗೆದುಕೊಳ್ಳುವ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ಅಷ್ಟೇ ಅಲ್ಲ ಸರ್ಕಾರಿ ಮುಖ್ಯಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿರುವ ವಿಜಯ್ ಭಾಸ್ಕರ್, ಅರಮನೆ ಮೈದಾನ ಅಥವಾ ಇನ್ನಿತರ ಐಷಾರಾಮಿ ಸ್ಥಳದಲ್ಲಿ ಮಗಳ ಮದುವೆ ಮಾಡುವ ಬದಲಿಗೆ ವೈಯಾಲಿಕಾವಲ್ನಲ್ಲಿರುವ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಸರಳವಾಗಿ ವಿವಾಹ ಮಾಡುತ್ತಿರುವುದು ವಿಶೆಷ.
ಉದ್ಯಮಿ ಗೌತಮ್ ಕುಮಾರ್ ರಾಜಾ ಜತೆಗೆ ವಿಜಯಭಾಸ್ಕರ್ ಪುತ್ರಿ ವಿಶೃತಿ ವಿವಾಹ ನೆರವೇರಲಿದೆ. ಮಗಳ ವಿವಾಹ ಹಿನ್ನಲೆಯಲ್ಲಿ ಶುಕ್ರವಾರ ಮಾತ್ರ ವಿಜಯಭಾಸ್ಕರ್ ರಜೆ ತೆಗೆದುಕೊಂಡಿದ್ದು, ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಇದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಭಾಸ್ಕರ್, ನಮ್ಮ ಕುಟುಂಬದಂತೆಯೇ ಭಾವಿ ಅಳಿಯನ ಕುಟುಂಬದವರೂ ಸರಳವಾಗಿದ್ದಾರೆ. ನಾನು ಕಚೇರಿಯಲ್ಲಿ ಕಾರ್ಯನಿರತವಾಗಿರುವ ಸಮಯದಲ್ಲಿ ಮದುವೆಯ ಪೂರ್ವಭಾವಿ ಕಾರ್ಯವನ್ನು ಪತ್ನಿ ರುಕ್ಮಿಣಿ ನಡೆಸಿದರು ಎಂದು ತಿಳಿಸಿದ್ದಾರೆ.