ಬೆಂಗಳೂರು, ಡಿಸೆಂಬರ್ 30, 2022 (www.justkannada.in): ಜನವರಿ 31 ರಿಂದ ಸಂಕಷ್ಟದಲ್ಲಿರುವಂತಹ ಮಕ್ಕಳು ಅಥವಾ ಸಹಾಯದ ಅಗತ್ಯವಿರುವಂತಹ ಮಕ್ಕಳು ಸಹಾಯವಾಣಿ ಸಂಖ್ಯೆ 1098 ಬದಲು 112 ನ್ನು ಡಯಲ್ ಮಾಡಬೇಕಾಗುತ್ತದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ರಾಷ್ಟ್ರೀಯ ತುರ್ತು ಸಂಖ್ಯೆ ೧೧೨ರೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಅಧೀನ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಪ್ರಭಾತ್ ಅವರು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯ ಇಲಾಖೆಗಳ ಎಲ್ಲಾ ಪ್ರಧಾನ ಕಾರ್ಯದರ್ಶಿಗಳಿಗೂ ಪತ್ರಗಳನ್ನು ಬರೆದು, ಇನ್ನು ಮುಂದೆ ಮಕ್ಕಳ ಸಹಾಯವಾಣಿಯನ್ನು ರಾಜ್ಯ ಹಾಗೂ ಜಿಲ್ಲಾ ಕಾರ್ಯನಿರ್ವಾಹಕರ ಸಂಯೋಜನೆಯೊಂದಿಗೆ ಹಾಗೂ ಕೇಂದ್ರ ಗೃಹ ವ್ಯವಹಾರಗಳ ತುರ್ತು ಪ್ರತಿಕ್ರಿಯಾ ಬೆಂಬಲ ವ್ಯವಸ್ಥೆ (ಇಆರ್‌ಎಸ್‌ಎಸ್) ಸಹಾಯವಾಣಿ ೧೧೨ರೊಂದಿಗೆ ವಿಲೀನಗೊಳಿಸುತ್ತಿರುವುದಾಗಿಯೂ ತಿಳಿಸಿ, ಇದಕ್ಕಾಗಿ ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್ (ಸಿ-ಡಿಎಸಿ)ನ ಸೇವೆಗಳನ್ನು ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಧೀನ ಕಾರ್ಯದರ್ಶಿಗಳು, ಸಿ-ಡ್ಯಾಕ್ ಗೆ ಅಗತ್ಯ ಮಾಹಿತಿ ಹಾಗೂ ವಿವರಗಳನ್ನು ಒದಗಿಸುವ ಮೂಲಕ ಅವರಿಗೆ ಅಗತ್ಯ ಬೆಂಬಲ ನೀಡಲು ರಾಜ್ಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಹಾಗೂ ಎರಡನೇ ಹಂತದ ಅಧಿಕಾರಿಗಳನ್ನು ಗುರುತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾಮಾಜಿಕ ನ್ಯಾಯದ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶಿಸಿದ್ದಾರೆ.
ಮಾನ್ಯ ಅಧೀನ ಕಾರ್ಯದರ್ಶಿಗಳು ತಮ್ಮ ಪತ್ರದಲ್ಲಿ, “ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಸರಿಯಾದ ವಿದ್ಯುತ್ ವೈರಿಂಗ್ ಹಾಗೂ ಇತರೆ ಅಗತ್ಯ ಪವರ್ ಸಾಕೆಟ್ ಗಳೊಂದಿಗೆ, ಹಾಗೂ ಸಿಹೆಚ್ ಎಲ್ (ಚೈಲ್ಡ್ ಹೆಲ್ಪ್ಲೈನ್) ಹಾಗೂ ಡಬ್ಲ್ಯುಹೆಚ್‌ಎಲ್ (ವುಮೆನ್ ಹೆಲ್ಪ್ ಲೈನ್) ಗೆ ಬರುವ ದೂರುಗಳನ್ನು ಆಲಿಸುವವರನ್ನು ಸ್ಥಳಾಂತರಿಸಲು ಇತರೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು,” ಎಂದು ಸೂಚಿಸಿದ್ದಾರೆ.
ಈ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಕರ್ನಾಟಕವು ಮೂರನೇ ಹಂತದಲ್ಲಿ ಈ ಪ್ರಕ್ರಿಯೆಯನ್ನು ಜನವರಿ ೨೦೨೩ರೊಳಗೆ ಪೂರ್ಣಗೊಳಿಸಬೇಕಾಗಿದೆ.
ಈ ಸಂಬಂಧ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಸರ್ಕಾರೇತರ ಸಂಸ್ಥೆ ಚೈಲ್ಡ್ ರೈಟ್ಸ್ ನ ಕಾರ್ಯಕರ್ತರಾದ ನಾಗಸಿಂಹ ಜಿ. ರಾವ್ ಅವರು, ಸಹಾಯವಾಣಿ 1098 ಅನ್ನು ಮಕ್ಕಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ಉದ್ದೇಶೊಂದಿಗೆ ಆರಂಭಿಸಲಾಯಿತು. ಈವರೆಗೆ ಅದು ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಕಾಲ ಕ್ರಮೇಣ ೧೦೯೮ ಸಹಾಯವಾಣಿ ಮಕ್ಕಳಸ್ನೇಹಿ ಎಂಬ ಹೆಗ್ಗಳಿಕೆಯನ್ನೂ ಸಹ ಗಳಿಸಿದೆ. ಸಹಾಯವಾಣಿ ೧೦೯೮ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ, ಹಾಗಾಗಿ ಅದನ್ನು ಹಾಗೇ ಉಳಿಸಿಕೊಳ್ಳಬೇಕು. ಮಕ್ಕಳ ಸಹಾಯವಾಣಿ ೧೦೯೮ರಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಉದ್ಯೋಗಿಗಳು ಮಕ್ಕಳ ಕಾನೂನು, ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಆಪ್ತಸಮಾಲೋಚನೆ ಕ್ಷೇತ್ರದಲ್ಲಿ ತರಬೇತಿ ಹೊಂದಿರುವವರಾಗಿದ್ದಾರೆ. ಇಂತಹ ಮಕ್ಕಳಸ್ನೇಹಿ ಸಿಬ್ಬಂದಿಗಳು ಈಗ ನಿರುದ್ಯೋಗಿಗಳಾಗುವ ಸಂಭವ ಎದುರಾಗಿದೆ. ಮಕ್ಕಳ ಸಹಾಯವಾಣಿ ೧೦೯೮ ಮಕ್ಕಳನ್ನು ರಕ್ಷಿಸುವ ಸಲುವಾಗಿ ಅಭಿವೃದ್ಧಿಪಡಿಸಿರುವ ಒಂದು ಬಲಿಷ್ಠವಾದ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೇ ಹೊರತು, ನಿಷೇಧಿಸಬಾರದು,” ಎಂದು ರಾವ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಅಸೋಸಿಯೇಷನ್ ಫಾರ್ ಪ್ರಮೋಟಿಂಗ್ ಸೋಷಿಯಲ್ ಆಕ್ಷನ್ (ಆಪ್ಸಾ)ನ ಕಾರ್ಯನಿರ್ವಾಹಕ ನಿರ್ದೇಶಕರಾದ ಲಕ್ಷ್ಮೀಪತಿ ಪೆಂಡ್ಯಾಲ್ ಅವರು ಈ ಸಂಬಂಧ ಮಾತನಾಡಿ ಮಕ್ಕಳ ಸಹಾಯವಾಣಿ ೧೦೯೮ ಅನ್ನು ಇಆರ್ ಎಸ್ ಎಸ್ ೧೧೨ರೊಂದಿಗೆ ವಿಲೀನಗೊಳಿಸುವ ಕುರಿತು ಕೇಂದ್ರವು ಯಾವುದೇ ಮಕ್ಕಳ ಹಕ್ಕುಗಳ ಕಾರ್ಯಕರ್ತರೊಂದಿಗೆ ಚರ್ಚಿಸದೆ ನಿರ್ಧಾರ ತೆಗೆದುಕೊಂಡಿರುವುದು ಅಥವಾ ಈ ಕುರಿತ ಮಾಹಿತಿಯ ಕೊರತೆ ಕುರಿತು ಕಾಳಜಿಯನ್ನು ವ್ಯಕ್ತಪಡಿಸಿದರು.
ಮಕ್ಕಳ ಸಹಾಯವಾಣಿ ೧೦೯೮ ಅನ್ನು ಆಪ್ಸಾ ಕಳೆದ ೨೦ ವರ್ಷಗಳಿಂದಲೂ ನಿರ್ವಹಿಸುತ್ತಿದ್ದು, ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. “ಸಂಬಂಧಪಟ್ಟ ಪ್ರಾಧಿಕಾರಗಳು ಈ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ ಎಲ್ಲಾ ಭಾಗೀದಾರರ ಅಭಿಪ್ರಾಯವನ್ನು ಪಡೆದು ಅವರ ವಿಶ್ವಾಸವನ್ನು ಪಡೆದುಕೊಳ್ಳಬೇಕಿತ್ತು. ೧೦೯೮ ಸಹಾಯವಾಣಿಯಲ್ಲಿ ಅನೇಕ ಮಂದಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಇದರಿಂದ ಏನಾಗುತ್ತದೋ ಎಂದು ನನಗೆ ತಿಳಿಯುತ್ತಿಲ್ಲ,” ಎಂದರು.
ಆಪ್ಸಾದ ಸಾಮಾಜಿಕ ಕಾರ್ಯಕರ್ತೆ ರಾಧಾ ಆರ್ ಅವರು ಮಾತನಾಡಿ ದೇಶದಾದ್ಯಂತ ಚೈಲ್ಡ್ ಲೈನ್ ೧೦೯೮ರೊಂದಿಗೆ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಜನರ ಉದ್ಯೋಗ ಭದ್ರತೆ ಕುರಿತು ಕಾಳಜಿ ವ್ಯಕ್ತಪಡಿಸಿದರು. “ಪ್ರಸ್ತುತ ಚೈಲ್ಡ್ ಲೈನ್ ೧೦೯೮ ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಸೇವೆ ಹಾಗೂ ಉದ್ಯೋಗದ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಅವರನ್ನು ಉಳಿಸಿಕೊಳ್ಳದಿದ್ದರೆ, ಅಷ್ಟೂ ಜನರು ನಿರುದ್ಯೋಗಿಗಳಾಗುತ್ತಾರೆ,” ಎಂದು ತಮ್ಮ ಕಾಳಜಿ ಹೊರಹಾಕಿದರು.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Child Line -Off Line -Soon.