ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು- ಸಂಸದ ಶ್ರೀನಿವಾಸ ಪ್ರಸಾದ್.

ಮೈಸೂರು,ನವೆಂಬರ್,10,2022(www.justkannada.in):  ಇಂದು ಉನ್ನತ ಶಿಕ್ಷಣ ಮಾಡುತ್ತಿರುವ ಎಷ್ಟೋ ಮಕ್ಕಳಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ವರ್ಷದಿಂದ ವರ್ಷಕ್ಕೆ ಕ್ಯಾಂಪಸ್‌ ನಲ್ಲಿ ವಿದ್ಯಾರ್ಥಿಗಳು ಜಾಸ್ತಿ ಆಗುತ್ತಿದೆ. ಆದರೆ ಗುಣಮಟ್ಟದ ವಿದ್ಯಾರ್ಥಿಗಳು ಹೊರ ಬರುತ್ತಿಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರೊ. ಎಂ.ಎಸ್.ಶೇಖರ್ ಅವರ ಸೋಸಲೆ ಸಿದ್ದಪ್ಪ ಸಮಗ್ರ ಸಂಪುಟ (ಸಂಪಾದಿತ) ಮತ್ತು ಹೊರಳು ಹಾದಿ (ವಿಮರ್ಶೆ) ಕೃತಿಗಳ ಬಿಡುಗಡೆ ಹಾಗೂ ವಿಚಾರಗೋಷ್ಢಿ ಸಮಾರಂಭದಲ್ಲಿ ಮಾತನಾಡಿದರು. ಇಂದು ಸಾಕಷ್ಟು ಸಂಶೋಧನಾ ವಿದ್ಯಾರ್ಥಿಗಳಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಧೈರ್ಯ ಇಲ್ಲ. ಉಪನ್ಯಾಸ ವೃತ್ತಿಗೆ ಹೋಗಲು ಹಿಂಜರಿಯುತ್ತಾರೆ. ಪ್ರೆಸೆಂಟೇಶನ್ ಬರಲ್ಲ. ಉರು ಹೊಡೆದು ಪಾಸಾಗಿರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಹೆದರುತ್ತಾರೆ. ಬೋಧಕೇತರ ವಿಭಾಗಕ್ಕೆ ಕೆಲಸ ಕೊಡಿಸಿ ಅನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದು ಜ್ಞಾನವನ್ನು ವಿಕಾಸ ಮಾಡುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ಓದಿನ ಮೂಲಕ ಜ್ಞಾನ ಸಂಪಾದನೆ ಮಾಡಿಕೊಂಡರು. ಓದು ನಿಮ್ಮನ್ನು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. ಇಂದು ಅಂಬೇಡ್ಕರ್ ಅವರ ಮೀಸಲು ನೀತಿಯಿಂದ ಲೋಕಸಭೆಯಲ್ಲಿ ನಾವು ಕೂರಲು ಸಾಧ್ಯವಾಯಿತು. ವಿದ್ಯಾವಂತನಾದರೆ ಕೆಚ್ಚು ಬರುತ್ತದೆ. ಪರೀಕ್ಷೆಗೆ ಬೇಕಾದ ಓದು ಇದ್ದರೆ ಸಾಲದು. ಕಠಿಣ ಶ್ರಮ ವಿನಿಯೋಗಿಸಬೇಕು. ಬುದ್ಧ ಅಧ್ಯಯನ ಕೇಂದ್ರ ಸ್ಥಾಪನೆಗೆ ಪ್ರಧಾನ ಮಂತ್ರಿ ಬಳಿಯೂ ಮಾತನಾಡಿದ್ದೇನೆ. ಸಿಎಂ ಬಸವರಾಜ್ ಬೊಮ್ಮಾಯಿ ಜಾಗ ನೀಡಿದರೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಮಾತನಾಡಿ, ಪ್ರೊ.ಎಂ.ಎಸ್.ಶೇಖರ್ ಅವರ ಎರಡು ಕೃತಿಗಳು ಇಂದು ಬಿಡುಗಡೆ ಆಗುತ್ತಿರುವುದು ಸಂತೋಷದ ವಿಷಯ. ಸೋಸಲೆ ಸಿದ್ದಪ್ಪ ಅವರು ಅಂಬೇಡ್ಕರ್ ಅವರ ಸಮಕಾಲೀನರು. ಎಲೆಮರೆಕಾಯಿಯಂತಿದ್ದ ಸೋಸಲೆ ಸಿದ್ದಪ್ಪ ಅವರ ಬಗ್ಗೆ ಪುಸ್ತಕ ಬರೆದು ಆಧುನಿಕ ಕನ್ನಡದ ಪರಿಗೆ ಸೇರಿರುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಪುಸ್ತಕದಲ್ಲಿ 14 ಲೇಖನಗಳಿವೆ. ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಗುಚ್ಚವಿದೆ. 20ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿರುವ ಪ್ರೊ.ಶೇಖರ್ ಅವರು ಗಾಂಧಿ ಭವನದ ನಿರ್ದೇಶಕರಾಗಿದ್ದರು. ಗಾಂಧಿ ಭವನಕ್ಕೆ ಹೊಸ ಮೆರುಗು ತಂದರು. ಗಾಂಧಿ ಪ್ರತಿಮೆ ಸ್ಥಾಪಿಸಿದರು. ವಿಚಾರ ಸಂಕಿರಣ ಹಾಗೂ ಹಲವು ಮೌಲ್ವಿಕ ಕೃತಿಗಳನ್ನು ಹೊರ ತಂದರು. ಗಾಂಧಿ ಕವಿ ಗೋಷ್ಠಿ ಕೂಡ ಮಾಡಿದರು. ಜಾನಪದ ಅಕಾಡೆಮಿ ಪುಸ್ತಕ ಪ್ರಶಸ್ತಿ ಹಾಗೂ ಕವಿ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಕೂಡ ಇವರಿಗೆ ಸಿಕ್ಕಿದೆ. ಕಾವ್ಯ, ವಿಮರ್ಶೆ, ಪ್ರವಾಸ, ಜೀವನಚರಿತ್ರೆಯಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಎರಡು ವಿವಿಗಳಲ್ಲಿ ಇವರ ಕವನಗಳು ಪಠ್ಯವಾಗಿವೆ. ಬಹುಮುಖ ಕಾಳಜಿಯಿಂದ ಕೆಲಸ ಮಾಡಿದ್ದಾರೆ ಎಂದರು.

ಶಾಸಕ ಎನ್. ಮಹೇಶ್, ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ದನ್ (ಜನ್ನಿ), ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದೀಶ್ ಹಂಚೆ, ಚಿಂತಕ ಜಿ.ವಿ. ಆನಂದ್ ಮೂರ್ತಿ, ಸೋಸಲೆ ಸಿದ್ದಪ್ಪ ಅವರ ಸೊಸೆ ಸಿದ್ದಮ್ಮ, ಕವಿ ಮಹದೇವ ಶಂಕರ್ ಪುರ, ಪ್ರೊ.ನರೇಂದ್ರ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Key words: Children – quality -education- MP -Srinivasa Prasad-mysore university

ENGLISH SUMMARY..

Children should get quality education: MP Srinivasa Prasad
Mysuru, November 10, 2022 (www.justkannada.in): “Today many students who are pursuing higher studies do not know how to speak correctly. The number of students is increasing year-by-year in the campus. But, quality among the students is declining,” observed MP Srinivas Prasad.
He participated in the ‘Sosale Siddappa Samagra Samputa, and ‘Horalu Haadi’, books authored by Prof. M.S. Shekar, and seminar, held at the Rani Bahaddur auditorium today. “Today many research students cannot speak properly. They don’t have the courage and hesitate to get into teaching profession. They don’t have presentation skills, they just by heart the answers and pass the exams. Many of them are scared to face competitive exams and request for non-teaching jobs,” he said.
“Children should develop reading habits, it evolves knowledge. Dr. B.R. Ambedkar gained knowledge as he was a voracious reader. Reading will take you to new heights. Today we could sit in the Lok Sabha because of his reservation policy. A learned student will have more will power. Only exam preparation is not enough, you should work hard. I have spoken with the Prime Minister regarding establishment of the Buddha Research Center. Chief Minister Bommai has assured to announce grants in the budget if the required place is provided,” he observed.
MLA N. Mahesh, Rangayana former Director H. Janardhan (Janni), Kannada Book Authority former Chairman Nandish Hanche, G.V. Anandamurthy, Sosale Siddappa, his daughter-in-law Siddamma, poet Mahadeva Shankarapura, Prfo. Narendra Kumar and others participated.
Keywords: MP Srinivasa Prasad/ book release program