ಮೈಸೂರು, ಜೂನ್ 26, 2022 (www.justkannada.in): ಭಾರತದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಸಮಾಜದ ನಾಯಕಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿರುವ ಬಿಜೆಪಿ ಹೈಕಮಾಂಡ್ ಪರಿಶಿಷ್ಟ ಪಂಗಡಕ್ಕೆ ದೊಡ್ಡ ಉಡುಗೊರೆ ನೀಡಿದೆ ಎಂದು ರಾಜ್ಯ ಬಿಜೆಪಿ ಎಸ್ ಟಿ ಮೋರ್ಚಾ ಕೋಶಾಧ್ಯಕ್ಷ, ನಗರಪಾಲಿಕೆ ಆಡಳಿತ ಪಕ್ಷದ ನಾಯಕ ಶಿವಕುಮಾರ್ ತಿಳಿಸಿದ್ದಾರೆ.
ಮುಂದಿನ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಯಾರಾಗುತ್ತಾರೆಂಬ ಕುತೂಹಲ ದಿಂದ ಕಾದಿದ್ದವರಿಗೆ ಬಿಜೆಪಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರನ್ನು ಆಯ್ಕೆ ಮಾಡಲಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಮೇಲೆ ದಲಿತ ಸಮುದಾಯಕ್ಕೆ ಸೇರಿದ ರಾಮನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈಗ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡುವ ಮೂಲಕ ನಾಯಕ ಸಮಾಜಕ್ಕೆ ದೊಡ್ಡ ಗೌರವ, ಮನ್ನಣೆ ನೀಡಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ನಿಲುವು ಐತಿಹಾಸಿಕ ತೀರ್ಮಾನವಾಗಿದೆ ಎಂದು ಬಣ್ಣಿಸಿದ್ದಾರೆ.
ಬಿಜೆಪಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗಗಳ ಪರವಾಗಿ ಇದೆ ಎಂಬುದನ್ನು ಆಗಿಂದಾಗ್ಗೆ ನಿರೂಪಿಸುತ್ತಲೇ ಬಂದಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅರ್ಜುನ್ ಮುಂಡ ಸೇರಿದಂತೆ ಆರು ಮಂದಿಗೆ ಅವಕಾಶವನ್ನು ಕೊಟ್ಟಿದೆ.ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಬಿ.ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡಿದ್ದರೆ, ವಿಧಾನ ಪರಿಷತ್ ನಲ್ಲಿ ಹೇಮಲತಾ ನಾಯಕ್ ಅವರಿಗೆ ಅವಕಾಶ ಕೊಡುವ ಮೂಲಕ ನಾಯಕ ಸಮಾಜದ ಮಹಿಳೆಗೆ ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ ಬಜೆಟ್ ನಲ್ಲಿ ಪರಿಶಿಷ್ಟ ಪಂಗಡಕ್ಕೆ ೧೨೦೦೦ ಕೋಟಿ ಅನುದಾನವನ್ನು ಮೀಸಲಿಟ್ಟು ಹಲವಾರು ಯೋಜನೆಗಳನ್ನು ರೂಪಿಸಿರುವ ಕಾರಣ ನಾಯಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಹೇಳಿದ್ದಾರೆ.
ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಹತ್ತಾರು ಯೋಜನೆಗಳನ್ನು ನೀಡಿರುವ ಫಲವಾಗಿ ಸಾವಿರಾರು ಜನರಿಗೆ ಅನುಕೂಲ ಆಗಿದೆ. ಕಳೆದ ಮೂರು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಪರಿವಾರ ಮತ್ತು ತಳವಾರ ಪದವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಮೂಲಕ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ನಡೆಯುತ್ತಿದ್ದ ವಿಚಾರಣೆಗೆ ತಡೆ ಕೊಡುವ ಜತೆಗೆ ಸಿಂಧುತ್ವಪ್ರಮಾಣ ಪತ್ರ ಕೊಡುವಾಗ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ವಿಚಾರಣೆ ಮಾಡಿ ವರದಿ ಕೊಡುವುದನ್ನು ಕೈಬಿಟ್ಟಿರುವ ಪರಿಣಾಮ ಅನಗತ್ಯ ಕಿರುಕುಳ ತಪ್ಪಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಒಬ್ಬ ಬುಡಕಟ್ಟು ಮಹಿಳೆಗೆ ಅವಕಾಶ ಕೊಡುವ ಮೂಲಕ ಈ ಸಮಾಜಕ್ಕೆ ದೊಡ್ಡ ಸ್ಥಾನವನ್ನು ಕೊಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಹಲವರು ರಾಜ್ಯಗಳಲ್ಲಿ ಇರುವ ಪರಿಶಿಷ್ಟ ಪಂಗಡ ಜನರಿಗೆ ಕೊಟ್ಟ ಹುದ್ದೆಯಾಗಿದೆ. ಅದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.