ಚಿತ್ರ ಸಾಹಿತಿ ಶ್ಯಾಮಸುಂದರ ಕುಲಕರ್ಣಿ : ಮೌನ ನಿರ್ಗಮನ

ಬೆಂಗಳೂರು,ನವೆಂಬರ್,13,2024 (www.justkannada.in): ಹಿರಿಯ ಪತ್ರಕರ್ತರೂ, ಚಿತ್ರ ಸಾಹಿತಿಗಳೂ ಆಗಿದ್ದ ಶ್ಯಾಮ ಸುಂದರ ಕುಲರ್ಣಿಯವರು ಅಕ್ಟೋಬರ್ 31ರಂದು ನಮ್ಮನ್ನು ಅಗಲಿದ ಸುದ್ದಿ ಬಹಳ ತಡವಾಗಿ ತಿಳಿಯಿತು. ತಮ್ಮ ಸಾವಿನ ಸುದ್ದಿ ಯಾರಿಗೂ ತಿಳಿಯ ಬಾರದು ಎನ್ನುವುದೇ ಅವರ ಅಪೇಕ್ಷೆಯೂ ಆಗಿತ್ತೆಂದು ಕುಟುಂಬ ವರ್ಗದವರು ತಿಳಿಸಿದರು. ‘ಸುದ್ದಿ ಪ್ರಪಂಚ’ದಲ್ಲಿದ್ದವರು ‘ಸುದ್ದಿ’ ಯಾಗದೆ ನಿರ್ಗಮಿಸಲು ಬಯಸಿದ್ದು ಬಹಳ ಜನಕ್ಕೆ ಅಚ್ಚರಿ ತರಬಹುದು. ಆದರೆ ಕುಲಕರ್ಣಿಯವರ ಸೂಕ್ಷ್ಮ ಸಂವೇದನೆಯನ್ನು ಅರಿತವರಿಗೆ ಇದರ ಸಹಜತೆ ಗೊತ್ತಾಗುತ್ತದೆ. ಅವರಿಗೆ ಸುದ್ದಿ ಮಾಧ್ಯಮ ಪಡೆಯುತ್ತಿರುವ ತಿರುವುಗಳ ಬಗ್ಗೆ ನೋವು ಮತ್ತು ಆತಂಕಗಳೆರಡೂ ಇದ್ದವು. ಇತ್ತೀಚಿನ ದಿನಗಳಲ್ಲಿ ಹಲವು ಸಲ ಅದನ್ನು ನನ್ನ ಜೊತೆ ಹಂಚಿ ಕೊಂಡಿದ್ದರು.

ಶ್ಯಾಮಸುಂದರ ಕುಲಕರ್ಣಿಯವರು ಸಂಯುಕ್ತ ಕರ್ನಾಟಕ ಬಳಗದಲ್ಲಿ ಮುಖ್ಯವಾಗಿ ಪತ್ರಕರ್ತರಾಗಿದ್ದರು. ವೃತ್ತಿಗೆ ಬರುವ ಮೊದಲೇ ಅವರ ಚಿತ್ರರಂಗದ ಸೆಳೆತ-ನಂಟು ಎರಡೂ ಇತ್ತು. ‘ಮುಕ್ತಿ’ ಚಿತ್ರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿತ್ರೀಕರಣಗೊಂಡಾಗ ಕಲ್ಪನಾ ಹಿಡಿದು ಕೊಂಡ ನೋಟ್ ಬುಕ್ ಶ್ಯಾಮಸುಂದರ ಕಲುಕರ್ಣಿಯವರದಾಗಿತ್ತು. ಪ್ರವಾಹ ಪರಿಹಾರ ನಿಧಿಗೆ ಕಲಾವಿದರು ಯಾತ್ರೆ ನಡೆಸಿದಾಗ ರಾಜ್ ಕುಮಾರ್ ಅವರಿಗೆ ಕುಲಕರ್ಣಿ ಕೊಡೆ ನೀಡಿದ್ದರು. ಕಲ್ಪನಾ ಅವರ ಬರಹಗಾರ್ತಿ ಮುಖವನ್ನು ಚೆನ್ನಾಗಿ ಬಳಸಿಕೊಂಡವರಲ್ಲಿ ಕುಲಕರ್ಣಿಯವರು ಪ್ರಮುಖರು. ವಿಶೇಷಾಂಕಗಳಿಗೆ ಪ್ರಮುಖ ಲೇಖನಗಳನ್ನು ಬರೆಸಿದ್ದರು. ಕಲ್ಪನಾ ಬಿರುಗಾಳಿಯಂತೆ ಬಂದಾಗ ಅವರನ್ನು ಸಮಾಧಾನ ಮಾಡುವ ಚಾಣಕ್ಷತೆ ಅವರಿಗಿತ್ತು. ಡಾ.ರಾಜ್ ಕುಮಾರ್ ಸೇರಿದಂತೆ ಹಳೆ ತಲೆಮಾರಿನ ಕಲಾವಿದರನ್ನು ಕುಲಕರ್ಣಿ ಬಹಳ ಸೊಗಸಾಗಿ ಸಂದರ್ಶಿಸಿದ್ದರು. ಅವರ ಸಂದರ್ಶನಗಳು ಪತ್ರಕರ್ತರಿಗೆ ಮಾದರಿ ಎನ್ನುವಂತಿದ್ದವು.

ಸಹೋದ್ಯೋಗಿ ಬಿ.ಕೆ.ಗುರುರಾಜ್ ಅವರ ಪ್ರೇರಣೆಯಿಂದ ಶ್ಯಾಮ ಸುಂದರ ಕುಲಕರ್ಣಿ ‘ಛಲಗಾರ’ ಚಿತ್ರಕ್ಕೆ ‘ಮೂಡಣದಾ ರವಿ’ ಗೀತೆಯನ್ನು ಬರೆಯುವ ಮೂಲಕ ಚಿತ್ರರಂಗದ ಒಳಕ್ಕೆ ಬಂದರು. ‘ಬೆಸುಗೆ’ ಚಿತ್ರದ ‘ಯಾವ ಹೂವು ಯಾರ ಮುಡಿಗೋ’ ಗೀತೆ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದು ಕೊಟ್ಟಿತು. ‘ಒಲವಿನ ಉಡುಗೊರೆ ಕೊಡಲೇನು’ (ಒಲವಿನ ಉಡುಗೊರೆ) ‘ಹೀರೊ ಹೀರೋ ನಾನೇ’ (ಅಜೇಯ) ‘ಸುತ್ತ ಮುತ್ತಲು ಸಂಜೆಗತ್ತಲು’ (ಪರಾಜಿತ)’ಪ್ರೀತಿಸಿದೆ ಪ್ರೇಮಿಸಿದೆ’ (ಶಿಕಾರಿ), ‘ನಿಮ್ಮ ಮಗುವೂ’ (ಗೌರಿ ಗಣೇಶ)’ನನ್ನ ಮರೆಯದಿರು’ (ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು), ‘ನೀಲಿ ಬಾನಲಿ’ (ಭರತ್) ‘ಸೇವಂತಿಯೇ ಸೇವಂತಿಯೇ’ (ಸೂರ್ಯ ವಂಶ) ಸೇರಿದಂತೆ ಅನೇಕ ಜನಪ್ರಿಯ ಗೀತೆಗಳನ್ನು ಅವರು ಬರೆದಿದ್ದರು. ‘ಒಂದು ಸಿನಿಮಾ ಕತೆ’ಗೆ ಅವರು ಬರೆದ ‘ಕನ್ನಡ ಹೊನ್ನುಡಿ ದೇವಿಯನು’ ಕನ್ನಡ ಚಿತ್ರ ಸಾಹಿತ್ಯವನ್ನೇ ಬಿಂಬಿಸುವ ಮಹತ್ವದ ಗೀತೆ. ಇತಿಹಾಸಕಾರ ಮತ್ತು ಗೀತರಚನೆಕಾರ ಎರಡೂ ಗುಣಗಳೂ ಒಬ್ಬರಲ್ಲಿಯೇ ಮೇಳೈಸಿದರೆ ಮಾತ್ರ ಸಾಧ್ಯವಾಗುವ ಅದ್ಭುತ ಇದು. ‘ಹೊಸ ರಾಗ’ ‘ಗಣೇಶ ಸುಬ್ರಹ್ಮಣ್ಯ’ ‘ಒಂದು ಸಿನಿಮಾ ಕತೆ’ ಮೊದಲಾದ ಚಿತ್ರಗಳಿಗೆ ಸಾಹಿತ್ಯವನ್ನು ಕೂಡ ಅವರು ರಚಿಸಿದ್ದರು.

ಗಾಂಧಿನಗರ ‘ಕಾನಿಷ್ಕ ಹೋಟಲ್’ನಲ್ಲಿ ಒಂದು ಕಾಲದಲ್ಲಿ ಶ್ಯಾಮಸುಂದರ ಕುಲಕರ್ಣಿಯವರು ಸದಾ ಸಿಗುತ್ತಿದ್ದರು. ಅವರ ಬತ್ತಳಿಕೆಯಲ್ಲಿ ಇತಿಹಾಸದ ಹಲವು ರೋಚಕ ಪ್ರಸಂಗಗಳಿದ್ದವು. ಅವರ ಗ್ರಹಿಕೆ ಮತ್ತು ಒಳನೋಟಗಳು ಅದ್ಭುತವಾಗಿದ್ದವು. ನಾನು ಬೆಂಗಳೂರು ‘ವಿವಿಧ ಭಾರತಿ’ಗೆ ಅವರ ಸಂದರ್ಶನ ಮಾಡಿದ್ದೆ. ಸಾಂಸ್ಕೃತಿಕ ದಾಖಲೆ ಎನ್ನಿಸ ಬಲ್ಲ ಗಟ್ಟಿತನ ಅದಕ್ಕಿತ್ತು. ‘ಮಲ್ಲಿಗೆ ಮಾಸಪತ್ರಿಕೆಗೆ ಚಿತ್ರರಂಗದ ವರ್ಷದ ರಿಪೋರ್ಟ್ ಕಾರ್ಡ್ ಅನ್ನು ವಿಶಿಷ್ಟವಾಗಿ ಮಾಡಿ ಕೊಡುತ್ತಿದ್ದರು. ಅವರ ಕುರಿತು ಒಂದು ವಿಶೇಷ ಸಂಚಿಕೆ ರೂಪಿಸುವ ಉದ್ದೇಶ ನನಗಿತ್ತು. ಅದಕ್ಕಾಗಿ ಅವರ ವಿಶೇಷ ಸಂದರ್ಶನ ಕೂಡ ನಡೆದಿತ್ತು. ಕೆಲವು ಅವರ ನಿಕಟವರ್ತಿಗಳಿಂದ ಲೇಖನಗಳನ್ನು ಬರೆಸಿದ್ದೆ. ಅಷ್ಟರಲ್ಲಿ ಅವರ ಖಾಸಗಿ ಜೀವನದಲ್ಲಿ ದೊಡ್ಡ ದುರಂತವೊಂದು ಸಂಭವಿಸಿತು ಅಲ್ಲಿಂದ ಮುಂದೆ ಅವರು ಸಾರ್ವಜನಿಕ ಬದುಕಿನಿಂದ ದೂರವಾಗಿ ಹೆಚ್ಚು ಅಂತರ್ಮುಖಿಗಳಾಗುತ್ತಾ ಹೋದರು. ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ಕರ್ನಾಟಕ ಚಲನಚಿತ್ರ ಅಕಾಡಮಿಗಾಗಿ 2000-2010ರವರೆಗಿನ ಕನ್ನಡ ಚಿತ್ರರಂಗದ ಇತಿಹಾಸವನ್ನು ದಾಖಲಿಸುವ ‘ಚಂದನ ವನ’ದ ಪ್ರಧಾನ ಸಂಪಾದಕತ್ವ ಬಹುಷ:  ಅವರು ನಿರ್ವಹಿಸಿದ ಕೊನೆಯ ಹೊಣೆಗಾರಿಕೆ.

ಕಳೆದ ಹತ್ತು ವರ್ಷಗಳಿಂದಲೂ ಅನಾರೋಗ್ಯ ಅವರನ್ನು ಬಹುವಾಗಿ ಕಾಡಿತು. ಅವರ ಅಗಲುವಿಕೆಯಿಂದ ಸಜ್ಜನಿಕೆಯ ಪರಂಪರೆಯ ಕೊನೆಯ ಕೊಂಡಿಗಳಲ್ಲೊಂದು ಕಳಚಿದಂತಾಗಿದೆ. ಅವರ ಅಭಿಲಾಷೆಯಂತೆ ಅವರ ಸಾವು ‘ಸುದ್ದಿ’ಯಾಗುವುದು ಬೇಡ ‘ಸಜ್ಜನಿಕೆಯ ನೆನಪಾಗಿ’ ಉಳಿದರೆ ಸಾಕು!

-ಎನ್.ಎಸ್.ಶ್ರೀಧರ ಮೂರ್ತಿ

Key words: Cinematography, senior journalist,  Shyamasundara Kulkarni,  Silent Exit