ಮೈಸೂರು,ಮಾರ್ಚ್,10,2025 (www.justkannada.in): ರಾಜ್ಯ ಬಜೆಟ್ ನಲ್ಲಿ ಪೌರ ಕಾರ್ಮಿಕರನ್ನು ಕಡೆಗಣನೆ ಮಾಡಿರುವುದನ್ನು ಖಂಡಿಸಿ ನಾಳೆ ಮೈಸೂರಿನಲ್ಲಿ ಪ್ರತಿಭಟನಾ ಧರಣಿ ನಡೆಸಲು ಪೌರಕಾರ್ಮಿಕರು ಮುಂದಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ರಾಜ್ಯಾಧ್ಯಕ್ಷ ಡಿ.ಆರ್ ರಾಜು, ಪೌರ ಕಾರ್ಮಿಕರಿಗೆ ನೇರ ಪಾವತಿ ಮೂಲಕ ವೇತನ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಬಜೆಟ್ ನಲ್ಲಿ ನಮ್ಮ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ. ಈ ಬಾರಿಯ ಬಜೆಟ್ ನಲ್ಲಿ ಸ್ವಚ್ಚತಾ ನೌಕರರನ್ನು ಕಡೆಗಣಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ನೇರ ಪಾವತಿ ಮೂಲಕ ವೇತನ ನೀಡುತ್ತೇವೆ ಎಂಬ ಆಶ್ವಾಸನೆ ನೀಡಿತ್ತು. ಆದರೆ ಬಜೆಟ್ ನಲ್ಲಿ ನಮ್ಮನ್ನು ಕಡೆಗಣಿಸಲಾಗಿದ್ದು, ಇದನ್ನು ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಈ ಮೂಲಕ ಮೈಸೂರು ಜಿಲ್ಲೆಯಿಂದಲೇ ನಮ್ಮ ಹೋರಾಟ ಆರಂಭಿಸುತ್ತೇವೆ. ಜಿಲ್ಲೆಯಾದ್ಯಂತ ಇರುವ 13 ಯು.ಎಲ್.ಬಿ ಗಳಲ್ಲಿ ಕೆಲಸ ಮಾಡುವ ಸಾವಿರಾರು ಪೌರ ಕಾರ್ಮಿಕರು ಕರ್ತವ್ಯಕ್ಕೆ ಗೈರಾಗಿ ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾದ ಪ್ರತಿಭಟನಾ ಧರಣಿ ಮಾಡುತ್ತೇವೆ. ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದರು.
ಈ ಮೂಲಕ ನಮಗೆ ನೇರ ಪಾವತಿ ಮೂಲಕ ವೇತನ ಸಿಗುವಂತೆ ಮಾಡಬೇಕು. ಏಜೆನ್ಸಿ ಮೂಲಕ ವೇತನ ಕಡಿಮೆ ಸಿಗುತ್ತಿದೆ. ನೇರ ಪಾವತಿ ಮೂಲಕ ಕೊಟ್ಟರೆ 21 ಸಾವಿರ ಸಿಗುತ್ತದೆ. ಏಜೆನ್ಸಿ ಮೂಲಕ ಕೊಟ್ಟರೆ ಕೇವಲ 15 ಸಾವಿರ ಸಿಗೋದೆ ಹೆಚ್ಚು. ಅದರಲ್ಲೂ ಖಾಸಗಿ ಏಜೆನ್ಸಿ ಅವರು ಸರಿಯಾಗಿ ಸಮಯಕ್ಕೆ ಸರಿಯಾಗಿ ವೇತನ ಕೊಡಲ್ಲ. ಹಾಗಾಗಿ ನೇರವಾಗಿ ವೇತನ ನಮ್ಮ ಖಾತೆಗೆ ಸರ್ಕಾರವೇ ಹಾಕಬೇಕು ಎಂದು ಆಗ್ರಹಿಸುತ್ತೇವೆ ಎಂದು ಡಿ.ಆರ್ ರಾಜು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಮಂಚಯ್ಯ, ವಸಂತ ಕುಮಾರಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
Key words: Neglect, civic workers, budget, Protest, Mysore, tomorrow