ಬೆಂಗಳೂರು, ಡಿಸೆಂಬರ್ 12, 2022(www.justkannada.in): ಬೆಂಗಳೂರಿನ ಹಲವು ಶಾಲೆಗಳು, ಮಕ್ಕಳು ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆಯುವುದು ಅಥವಾ ಅದನ್ನು ಉಪಯೋಗಿಸದಿರುವಂತೆ ಎಚ್ಚರಿಕೆ ವಹಿಸುವಂತೆ ಪೋಷಕರಿಂದ ಸಹಿಯನ್ನು ಪಡೆದುಕೊಳ್ಳುವ ಪರಿಪಾಠ ಆರಂಭಿಸಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಸಕ್ರಿಯವಾಗಿರುವಂತಹ ಮಕ್ಕಳನ್ನು ಅವರ ಅತ್ಯಾಸಕ್ತಿಯನ್ನು ದೂರಗೊಳಿಸಲು ಶಾಲೆಗಳು ಹೆಣಗಾಡುತ್ತಿವೆ. ಹಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳೂ ತಮ್ಮ ಶಿಕ್ಷಕರಿಗೆ ‘ಫ್ರೆಂಡ್ ರಿಕ್ವೆಸ್ಟ್’ಗಳನ್ನು ಕಳುಹಿಸಲು ಆರಂಭಿಸಿದ್ದಾರಂತೆ. ಜೊತೆಗೆ, ಶಾಲೆಗಳಲ್ಲಿ ನಿರ್ಬಂಧಿಸಿರುವುದನ್ನು ಉಲ್ಲಂಘಿಸಿ ಸಮವಸ್ತ್ರದಲ್ಲಿರುವಂತೆಯೇ ‘ರೀಲ್ಸ್’ ಮಾಡಿ ಅದನ್ನು ಹರಿಬಿಡುತ್ತಿದ್ದಾರಂತೆ.
ಶಾಲೆಗಳ ಪ್ರಾಧಿಕಾರಗಳ ಪ್ರಕಾರ, ಅನೇಕ ಪೋಷಕರು ತಮ್ಮ ಮಕ್ಕಳು ಇನ್ ಸ್ಟಾಗ್ರಾಂ, ಫೇಸ್ ಬುಕ್, ಸ್ನ್ಯಾಪ್ ಚಾಟ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕುರಿತು ಮಾಹಿತಿ ಹೊಂದಿದ್ದಾರೆ. “ಸಾಮಾಜಿಕ ಮಾಧ್ಯಮ ಜಾಲತಾಣಗಳು ಹಾಗೂ ಇತರೆ ವೇದಿಕೆಗಳಿಂದ ಸೈನ್ ಔಟ್ ಆಗುವಂತೆ ಅಥವಾ ಅದನ್ನು ‘ಡಿಆ್ಯಕ್ಟಿವೇಟ್’ ಮಾಡುವಂತೆ ಪೋಷಕರಿಗೆ ಸೂಚನೆ ನೀಡಿ ಅವರಿಂದ ಸಹಿಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದ್ದೇವೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಪ್ರತಿಷ್ಠತಿ ಸಿಬಿಎಸ್ ಇ ಶಾಲೆಯ ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದ್ದಾರೆ.
ಬನಶಂಕರಿ ೩ನೇ ಹಂತದಲ್ಲಿರುವ ಲಿಟಲ್ ಫ್ಲವರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಬಿ. ಗಾಯಿತ್ರಿ ದೇವಿ ಅವರು ತಿಳಿಸಿದಂತೆ ಪೋಷಕರಿಗೆ ಸುತ್ತೋಲೆಗಳನ್ನೂ ಸಹ ಕಳುಹಿಸಲಾಗಿದೆಯಂತೆ. “ಸಂಪರ್ಕಿಸುವುದು ಅನಿವಾರ್ಯವಾದರೆ, ಮಕ್ಕಳಿಗೆ ಕೇವಲ ಒಂದು ಬೇಸಿಕ್ ಸೆಲ್ ಫೋನ್ ಅನ್ನು ಮಾತ್ರ ಒದಗಿಸುವಂತೆ ಪೋಷಕರಿಗೆ ನಾವು ಸಲಹೆ ನೀಡಿದ್ದೇವೆ. ಒಂದು ವೇಳೆ ಸ್ಮಾರ್ಟ್ ಫೋನ್ ಅನಿವಾರ್ಯವಾದರೆ ಮಕ್ಕಳ ಬಳಕೆಯ ಮೇಲೆ ನಿಗಾವಹಿಸಬೇಕು,” ಎಂದು ತಿಳಿಸಿದರು. ಮಕ್ಕಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿರುವುದಕ್ಕೆ ಶಾಲಾ ಆಡಳಿತಗಳು ಪೋಷಕರನ್ನು ದೂಷಿಸಿವೆ. ಮಕ್ಕಳನ್ನು ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯನ್ನು ನಿರ್ಬಂಧಿಸುವುದು ಪೋಷಕರ ಜವಾಬ್ದಾರಿ ಎನ್ನುವುದು ಅವರ ವಾದವಾಗಿದೆ.
“ಶಾಲೆಗಳಲ್ಲಿ ಫೋನ್ ಗಳನ್ನು ತರಲು ಅನುಮತಿಯಿಲ್ಲ. ಆದರೆ ಮನೆಗಳಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸಾಮಾಜಿಕ ಮಾಧ್ಯಮಗಳು ಸಹ ಲಭ್ಯವಾಗುತ್ತವೆ. ಇದಕ್ಕೆ ಪೋಷಕರೇ ಜವಾಬ್ದಾರರು ಹಾಗೂ ನಿಗಾವಹಿಸುವುದೂ ಸಹ ಅವರ ಜವಾಬ್ದಾರಿ,” ಎನ್ನುತ್ತಾರೆ ಆಕ್ಸ್ ಫರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ ಪ್ರಾಂಶುಪಾಲರಾದ ಬಿ.ಆರ್. ಸುಪ್ರೀತ್.
ಮುಂದುವರೆದು, 10 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳೂ ಸಹ ಇನ್ ಸ್ಟಾಗ್ರಾಂ ಖಾತೆಗಳು ಹೊಂದಿರುವ ಪ್ರಕರಣಗಳನ್ನೂ ನಾವು ಕಂಡಿದ್ದೇವೆ. “ಅವರು ಇನ್ ಸ್ಟಾಗ್ರಾಂ ಅಥವಾ ಮತ್ಯಾವುದಾದರೂ ಖಾತೆಯನ್ನು ಹೊಂದಿದಾಗ ಅವರ ವಯಸ್ಸಿನ ಅನುಗುಣವಾಗಿ ಅವರಿಗೆ ವಿಷಯ ದೊರೆಯುತ್ತವೆ. ಅಪರಿಚಿತರೊಂದಿಗೂ ಸ್ನೇಹ ಹೊಂದುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ,” ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಮಾಧ್ಯಮವನ್ನು ಏಕೆ ಮತ್ತು ಹೇಗೆ ನಿರ್ವಹಿಸಬೇಕು ಎಂದು ತಿಳಿಸಲು ವಿಶೇಷ ತರಗತಿಗಳನ್ನು ನಡೆಸುತ್ತಿವೆ.
“ಕೋವಿಡ್ ಸಾಂಕ್ರಾಮಿಕದ ನಂತರವಂತೂ ಈ ರೀತಿಯ ಸಮಸ್ಯೆಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅನೇಕ ಮಕ್ಕಳಲ್ಲಿ ಬೇಜವಾಬ್ದಾರಿ ಸಾಮಾಜಿಕ ಮಾಧ್ಯಮ ನಡವಳಕೆ ಕಂಡು ಬರುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಾವು ಕಡಿವಾಣ ಹಾಕಿದರೂ ಸಹ, ಅವರು ಮನೆಯಲ್ಲಿ ಅದನ್ನು ಬಳಸುತ್ತಾರೆ. ಹಾಗಾಗಿ, ಜವಾಬ್ದಾರಿಯುತ ಆನ್ ಲೈನ್ ನಡವಳಿಕೆಯ ಕುರಿತು ಅವರನ್ನು ಶಿಕ್ಷಿತರನ್ನಾಗಿಸುತ್ತಿದ್ದೇವೆ,” ಎಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಆಡಳಿತ ಮಂಡಳಿಯ ಸದಸ್ಯರಾದ ಮನ್‌ಸೂರ್ ಅಲಿ ಖಾನ್ ತಿಳಿಸಿದರು.
ಕರ್ನಾಟಕ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ನಿರ್ವಹಣಾ ಮಂಡಳಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಶಶಿ ಕುಮಾರ್ ಅವರು, ಸರ್ಕಾರ ಈ ನಿಟ್ಟಿನಲ್ಲಿ ಮಕ್ಕಳ ಸುರಕ್ಷತೆಗಾಗಿ ಒಂದು ಬಲಿಷ್ಠವಾದ ಸೈಬರ್ ನೀತಿಯನ್ನು ಪರಿಚಯಿಸಬೇಕು ಎಂದು ಕೋರಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: class – schools –reduce- interest – students- social media. – parents