ಬೆಂಗಳೂರು,ಏಪ್ರಿಲ್,19,2021(www.justkannada.in): ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಿಸುವ ಕುರಿತು ಇಂದು ನಡೆದ ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಕೊರೋನಾ ತಡೆ ಕುರಿತು ಬೆಂಗಳೂರು, ಸಚಿವರು, ಸಂಸದರು, ಶಾಸಕರ ಸಭೆ ನಡೆಸಲಾಯಿತು. ಸಭೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಬೇಡ. 144 ಸೆಕ್ಷನ್ ಜಾರಿ ಮಾಡಿ ಎಂದು ವಿಪಕ್ಷಗಳ ಸದಸ್ಯರು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಶಾಸಕ ರಾಮಲಿಂಗರೆಡ್ಡಿ, ಈ ಸಂದರ್ಭದಲ್ಲಿ ನಮ್ಮ ಸಂಪೂರ್ಣ ಸಹಕಾರ ತಮಗೆ ಇದೆ. ನಾವು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ತಾವೂ ಈ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಆಹಾರವಾಗಲೀ ಅಥವಾ ಔಷಧಿಯಾಗಲೀ ನ್ಯಾಯಯುತವಾಗಿ ವಿತರಿಸಿ. ರಾಜ್ಯದಲ್ಲಿ ಒಂದೆಡೆ ಹಾಸಿಗೆ ಇಲ್ಲ, ಮತ್ತೊಂದೆಡೆ ತೀವ್ರ ನಿಗಾ ಘಟಕದಲ್ಲಿ ಸ್ಥಳಾವಕಾಶ ಇಲ್ಲ, ಮಗದೊಂದೆಡೆ ಆಮ್ಲಜನಕದ ದಾಸ್ತಾನು ಇಲ್ಲ ಎಂಬ ಭಯಾನಕ ಪರಿಸ್ಥಿತಿ ಉಂಟಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಕನಿಷ್ಠ 25,000 ಹಾಸಿಗೆಗಳನ್ನು ವ್ಯವಸ್ಥೆ ಮಾಡಿ.
ಮನೆಯಲ್ಲಿ ದಿಗ್ಬಂಧನದಲ್ಲಿರುವ (ಹೋಮ್ ಐಸೋಲೇಷನ್ ) ಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಲಾಕ್ ಡೌನ್ ಗಿಂತಲೂ ದಂಡಪ್ರಕ್ರಿಯಾ ಸಂಹಿತೆ ಪರಿಚ್ಛೇಧ 144 ಜಾರಿ ಮಾಡಿ ಗುಂಪು ಸೇರುವುದನ್ನು ತಡೆಯುವುದು ಉತ್ತಮ. ಕಲ್ಯಾಣ ಮಂಟಪ, ಸಮುದಾಯ ಭವನ, ಮಾರುಕಟ್ಟೆ ಗಳಲ್ಲಿ ಜನಸಂದಣಿ ನಿಯಂತ್ರಿಸಿ. ನೈಟ್ ಕರ್ಫ್ಯೂ ಸಮಯ ಬದಲಾವಣೆ ಅಗತ್ಯವಿಲ್ಲ. ಕೊಳಗೇರಿಗಳಲ್ಲಿ ಲಸಿಕಾ ಆಭಿಯಾನಕ್ಕೆ ಒತ್ತು ಕೊಡಿ. ಬಿ ಯು ನಂಬರ್ ಸೃಜನೆಯಾಗುವಲ್ಲಿ ವಿಳಂಬವಾಗುತ್ತಿದೆ ಎಂದರು.
ಶಾಸಕ ಬಿ ಝಡ್ ಜಮೀರ್ ಅಹಮದ್ ಅವರು ಮಾತನಾಡಿ ಬಡವರು, ಮಧ್ಯಮ ವರ್ಗಕ್ಕೆ ಲಾಕ್ ಡೌನ್ ಕಷ್ಟ ತಂದೊಡ್ಡುತ್ತದೆ. ಲಾಕ್ ಡೌನ್ ಪರಿಹಾರ ಅಲ್ಲ. ಪ್ರತಿ ಶಾಸಕರಿಗೂ ಕನಿಷ್ಠ 25 ಹಾಸಿಗೆಗಳು ಮೀಸಲಿರಿಸಿ. ಹಾಸಿಗೆಗಳನ್ನು ವಿತರಿಸಲು ಅವಕಾಶ ನೀಡಿ. ಚಾಮರಾಜಪೇಟೆ ಕ್ಷೇತ್ರದ ಜಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು 20,000 ಜನರಿಗೆ ಅವಕಾಶ ಇದ್ದರೂ, ಪವಿತ್ರ ರಂಜಾನ್ ಮಾಸದಲ್ಲಿ ಈ ಸಾಮರ್ಥ್ಯದ ಕಾಲು ಭಾಗ ಅಂದರೆ 5,000 ಜನರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕೋವಿಡ್-19 ರ ಸೋಂಕಿತರಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಿ. ರೆಮಿಡೆಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರನ್ನು ಬಂಧಿಸಿ ಎಂದು ಆಗ್ರಹಿಸಿದರು.
ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ. ಎಂ. ಇಬ್ರಾಹಿಂ ಅವರು ಮಾತನಾಡಿ ತಮ್ಮ.ಸ್ವಂತ ತಂದೆತಾಯಿಯನ್ನು ಹೆತ್ತ ಮಕ್ಕಳೂ ಮುಟ್ಟುತ್ತಿಲ್ಲ. ಶವದ ಮೂಲಕ ಕೋವಿಡ್-19 ರ ಸೋಂಕು ಹರಡುವುದಿಲ್ಲ ಎಂಬ ವಿಷಯವನ್ನು ಜನಸಾಮಾನ್ಯರಿಗೆ ವೈದ್ಯರ ಮೂಲಕ ಮನವರಿಕೆ ಮಾಡಿಕೊಡಿ. ಕನಿಷ್ಠ ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಎಂದು ಸಲಹೆ ನೀಡಿದರು.
ಇಂದು ನಡೆದ ಬೆಂಗಳೂರು ಶಾಸಕರ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ನಾಳೆ ಸಂಜೆ 4.30ಕ್ಕೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದ್ದು ಸರ್ವಪಕ್ಷ ಸಭೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾದ್ಯತೆ ಇದೆ.
Key words: Closing- Bengaluru Representatives -Meeting -Corona -control