ಮೈಸೂರು,ಜುಲೈ,28,2021(www.justkannada.in): ಸಿಎಂ ಬಸವರಾಜ ಬೊಮ್ಮಾಯಿಯಿಂದ ಒಳ್ಳೆಯ ಆಡಳಿತ ಕೊಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ರಾಜ್ಯದಲ್ಲಿ ಸರ್ಕಾರ ಅವಧಿ ಪೂರ್ಣಗೊಳಿಸುವುದನ್ನ ಕಾಲವೇ ನಿರ್ಣಯಿಸುತ್ತೆ. ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ತತ್ತರಿಸಿ ಹೋಗಿದೆ. ಒಳ್ಳೆಯ ಆಡಳಿತ ಕೊಡಲು ಬೊಮ್ಮಾಯಿಯಿಂದಲೂ ಆಗಲ್ಲ. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಬೊಮ್ಮಾಯಿಗೆ ಅಧಿಕಾರ ನಡೆಸಲು ಸ್ವತಂತ್ರ ಇರುತ್ತೋ, ಬೇರೆಯವರದ್ದು ಹಸ್ತಕ್ಷೇಪ ಇರುತ್ತೋ ಕಾದು ನೋಡಬೇಕು ಎಂದರು.
ಬೊಮ್ಮಾಯಿ ತಮಗಿರುವ ಆಡಳಿತ ಅವಧಿಯಲ್ಲಿ ಕರ್ನಾಟಕ ರಾಜ್ಯದ ಹಿತಾಸಕ್ತಿ ಕಾಯಬೇಕು. ರಾಜ್ಯಕ್ಕೆ ಕೇಂದ್ರದಿಂದ ಸಾಕಷ್ಟು ತಾರತಮ್ಯ ಆಗಿದೆ. ಯಡಿಯೂರಪ್ಪ ಸಿಎಂ ಆಗಿದ್ದ ಕಾಲದಲ್ಲಿ ಕೇಂದ್ರ ಸಾಕಷ್ಟು ನೆರವು ನೀಡಿಲ್ಲ.ನೂತನ ಸಿಎಂ ಕೇಂದ್ರಕ್ಕೆ ಒತ್ತಡ ಹಾಕಬೇಕು. ರಾಜ್ಯಕ್ಕೆ ಬೇಕಾದ ಹೆಚ್ಚು ಅನುದಾನವನ್ನು ತರಬೇಕು. ಎಲ್ಲಾ ವರ್ಗದವರಿಗೆ ಒಳ್ಳೆಯ ಆಡಳಿತ ನೀಡಲಿ ಎಂದು ನಮ್ಮ ಪಕ್ಷ ಆಶಿಸುತ್ತದೆ ಎಂದು ಆರ್ ಧ್ರುವನಾರಾಯಣ್ ಹೇಳಿದರು.
ಯಡಿಯೂರಪ್ಪ ಕಣ್ಣೀರಿಟ್ಟು ರಾಜೀನಾಮೆ ನೀಡಿದ್ದ ಲಾಭ ಕಾಂಗ್ರೆಸ್ ಪಡೆಯಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್.ದೃವನಾರಾಯಣ್, ಅವರ ಕಣ್ಣೀರಿನಿಂದ ನಾವು ಲಾಭ ಗಳಿಸುವ ಪ್ರಮೇಯ ಇಲ್ಲ. ಸರ್ಕಾರದ ವೈಪಲ್ಯಗಳನ್ನು ಜನರ ಮುಂದೆ ಇಟ್ಟು ಮತ ಸೆಳೆಯುವ ಪ್ರಯತ್ನ ಕಾಂಗ್ರೆಸ್ ಮಾಡಲಿದೆ. ಯಡಿಯೂರಪ್ಪ ವೀರಶೈವ ಸಮಾಜದ ಪ್ರಬಲ ನಾಯಕ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಜಾತಿ ಧರ್ಮ ಇಲ್ಲ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳು ಎಲ್ಲಾ ಜಾತಿ ಧರ್ಮಗಳನ್ನು ವಿಶ್ವಾಸ ಗಳಿಸುವುದು ಆಗಿದೆ. ಎಲ್ಲಾ ಬಡವರ್ಗವನ್ನು ಮೇಲೆತ್ತುವುದು ಕಾಂಗ್ರೆಸ್ ಪಕ್ಷದ ಧ್ಯೇಯ. ಕಾಂಗ್ರೆಸ್ ಜಾತಿ ಹಾಗೂ ಧರ್ಮಾದಾರಿತವಾಗಿ ಮತಯಾಚನೆ ಮಾಡಿಲ್ಲ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ವರ್ಗದವರಿಗೂ ಮಂತ್ರಿ ಸ್ಥಾನ ನೀಡಿದ್ದಾರೆ. ನಿಜವಾದ ಬಸವಣ್ಣನ ಅನುಭವ ಮಂಟಪ ಇರುವುದು ಕಾಂಗ್ರೆಸ್ ನಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ 6 ಜನ ಲಿಂಗಾಯತ ಸಮುದಾಯದವರಿಗೆ ಸಚಿವ ಸ್ಥಾನ ನೀಡಿತ್ತು ಎಂದರು.
ಯಡಿಯೂರಪ್ಪ ಹುಟ್ಟು ಹೋರಾಟಗಾರ ಹಾಗೂ ಸಂಘಟನಾಕಾರ. ಆದ್ರೆ ಒಳ್ಳೆ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಅವರಿಗೆ ಎರಡು ಬಾರಿ ಸುವರ್ಣಾವಕಾಶ ಸಿಕ್ಕಿತು. ಆದರೆ ಕುಟುಂಬದ ಕಾರಣ ಹಾಗೂ ಹಲವಾರು ಕಾರಣಗಳಿಂದ ಆಡಳಿತದಲ್ಲಿ ಬಹಳಷ್ಟು ಭಿನ್ನಾಭಿಪ್ರಾಯ ಉಂಟಾಗಿ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿಲ್ಲ. ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಭ್ರಷ್ಟಾಚಾರದ ಕೇಸ್ ಗಳು ದಾಖಲಾಗಿದ್ದವು. ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಕುಟುಂಬ ದೂರ ಇಟ್ಟು ಆಡಳಿತ ನಡೆಸಲಿಲ್ಲ. ವಿಜಯೇಂದ್ರರಿಂದ ಹಿರಿಯ ನಾಯಕರಿಗೆ ಹಿರಿಸುಮುರಿಸು ಉಂಟಾಗಿ ಭ್ರಷ್ಟಾಚಾರ ಕೇಳಿಬಂತು. ಅದ್ದರಿಂದ ಯಡಿಯೂರಪ್ಪ ಉತ್ತಮ ಆಡಳಿತ ನೀಡಲು ಸಾದ್ಯವಾಗಲಿಲ್ಲ ಎಂದು ಧ್ರುವನಾರಾಯಣ್ ತಿಳಿಸಿದರು.
Key words: CM Basavaraja Bommai -cannot – given- good governance- R. Dhruvanarayan.