ಮೈಸೂರು,ಜುಲೈ,29,2022(www.justkannada.in): ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದ್ದು, ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಸಿಎಂ ಬೊಮ್ಮಾಯಿ ಅವರಿಗೆ ಆಡಳಿತ ನಡೆಸುವ ತಾಕತ್ತಿಲ್ಲ. ಮಂಗಳೂರಿನ ಗಲಭೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.
ಫಾಝಿಲ್ ಕೊಲೆ ಪ್ರಕರಣ ಕುರಿತು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ಇದು ಮುಖ್ಯಮಂತ್ರಿ, ಗೃಹ ಸಚಿವರ ವೈಫಲ್ಯ. ರಾಜ್ಯದಲ್ಲಿ ಸರ್ಕಾರವೇ ಇಲ್ಲ, ಸರ್ಕಾರ ಸತ್ತು ಹೋಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿ ಅಲ್ಲೇ ಇದ್ದಾಗ ಕೊಲೆ ಆಗಿದೆ. ಅಂದರೆ ಇಂಟಲಿಜೆನ್ಸ್ ವೈಫಲ್ಯ ಅಲ್ವ ? ಇದು ಸರ್ಕಾರ, ಸಿಎಂ, ಗೃಹ ಸಚಿವರ ವೈಫಲ್ಯ ಅಲ್ವ ? ಜನ ಮನೆಯಿಂದ ಆಚೆ ಬರಲು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರದ ಅಗತ್ಯವಿದೆಯಾ..?
ರಾಜ್ಯ ಉತ್ತರ ಪ್ರದೇಶ ಆಗಿಬಿಟ್ಟಿದಿಯಾ ? ಇದನ್ನು ನೀವೇ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದೀರಾ..? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಬುಲ್ಡೋಜರ್ ಸರ್ಕಾರದ ಅಗತ್ಯವಿದೆಯಾ? ಯುಪಿ ಮಾದರಿ ರಾಜ್ಯ ಬದಲಾಗಿದೆಯಾ? ಬಿಹಾರ ರಾಜ್ಯದ ರೀತಿ ಆಗಿದೆಯಾ? ಯುಪಿ ರೀತಿ ಆಗಿದೆ ಎಂದು ಒಪ್ಪಿಕೊಂಡಂತೆ ಆಗುತ್ತಿದೆ. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಆ ರೀತಿ ರಾಜ್ಯದಲ್ಲೂ ಆಗಿಬಿಡುತ್ತದೆಯೆ? ಮಾತೆತ್ತಿದರೆ ಹಿಂದಿನ ಕಾಲದಲ್ಲಿ ಮಾಡಿದ್ದಾರೆ ಅಂತೀರಾ? ನಮಗೆ ಹೋಲಿಕೆ ಮಾಡಲು ಅಧಿಕಾರಿಕ್ಕೆ ಬಂದಿದ್ದೀರಾ? ಸಿದ್ದರಾಮಯ್ಯ ಸರ್ಕಾರದ ರೀತಿಯ ಸರ್ಕಾರ ಮಾಡುತ್ತೇವೆ ಅಂತ ಹೇಳಿದ್ರ ? ಜನರಿಗೆ ಆ ರೀತಿ ಭರವಸೆ ನೀಡಿ ಬಂದಿದ್ದೀರಾ? ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಕೋಮುಗಲಭೆ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದರಿಂದಲೇ ರಾಜ್ಯದಲ್ಲಿ ಗಲಭೆಗಳು ಸೃಷ್ಟಿ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ನನ್ನ ಅವಧಿಯಲ್ಲಿ ಮಾತ್ರ ಅಲ್ಲ, ಎಲ್ಲಾ ಸರ್ಕಾರಗಳಲ್ಲೂ ಕೇಸ್ ವಾಪಸ್ ಪಡೆದಿದ್ದಾರೆ. ಮೈಸೂರಿನಲ್ಲಿ ನಡೆದಿದ್ದ ಗಲಭೆಯಲ್ಲಿ ವಿದ್ಯಾರ್ಥಿಗಳ ಮೇಲೂ ಕೇಸ್ ದಾಖಲಾಗಿತ್ತು. ಅವರ ಭವಿಷ್ಯದ ಹಿತದೃಷ್ಟಿಯಿಂದ ಕೇಸ್ ವಾಪಸ್ ತೆಗೆದುಕೊಳ್ಳಲಾಗಿತ್ತು. ಈಗ ಬಿಜೆಪಿಯವರಿಗೆ ಎಸ್.ಡಿ.ಪಿ.ಐ ಮೇಲೆ ಕೋಪವಿದ್ರೆ ಆ ಸಂಘಟನೆಯನ್ನು ಬ್ಯಾನ್ ಮಾಡಿ. ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಬ್ಯಾನ್ ಮಾಡಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಸರ್ಕಾರವಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂಬ ತೇಜಸ್ವಿ ಸೂರ್ಯ ಹೇಳಿಕೆ ಕುರಿತು ಗರಂ ಆದ ಸಿದ್ಧರಾಮಯ್ಯ, ಒಬ್ಬ ಸಂಸದ ಆಡುವ ಮಾತೇನ್ರೀ ಇದು.? ಈಗ ಇವರ ಸರ್ಕಾರ ಇದೆ. ಕೊಳೆತ ಮೊಟ್ಟೆಯಲ್ಲಿ ಹೊಡೆಯಬೇಕಾ.? ಈಗ ಅವರಿಗೆ ಯಾವುದರಲ್ಲಿ ಹೊಡೆಯಬೇಕು.? ಚಪ್ಪಲಿಯಲ್ಲಿ ಹೊಡೆಯಬೇಕಾ ಎಂದು ಪ್ರಶ್ನಿಸಿದರು. ಬಳಿಕ ಚಪ್ಪಲಿ ಪದ ನಾನು ಬಳಸಿದ್ದು ಸರಿಯಲ್ಲ ಎಂದು ತಕ್ಷಣ ತಿದ್ದಿಕೊಂಡ ಸಿದ್ದರಾಮಯ್ಯ, ನಾನು ಆಕ್ರೋಶದಿಂದ ಆ ಪದ ಬಳಸಿದೆ. ಆ ಪದವನ್ನ ನಾನು ಬಳಸಬರದಿತ್ತು ಎಂದು ಹೇಳಿ ನಾನು ಆ ಪದ ಬಳಕೆಯನ್ನು ನಾನು ವಾಪಾಸ್ ಪಡೆಯುತ್ತಿದ್ದೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.
Key words: CM Bommai-state government -responsible – riots – Mangalore- Former CM-Siddaramaiah.