ಬೆಂಗಳೂರು, ಮೇ. 26,2021(www.justkannada.in): ರಾಜ್ಯಮಟ್ಟದಲ್ಲಿ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಗಳನ್ನು ಸುಗಮವಾಗಿ ಮುಂದುವರೆಸಲು ಸರ್ಕಾರ ಮತ್ತು ದಾನಿಗಳ ನಡುವೆ ಪಾರದರ್ಶಕ ಸೇತುವೆಯಾಗಿ ಕಾರ್ಯನಿರ್ವಹಿಸಲು ಯೋಜನಾ ಇಲಾಖೆಯು ಯುಎನ್‍ಡಿಪಿ ಸಹಯೋಗದೊಂದಿಗೆ ಸಿಎಸ್ ಆರ್ ಅನುದಾನವನ್ನು ಪಡೆಯಲು ಆಕಾಂಕ್ಷ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದರು.
ಪೋರ್ಟಲ್ ನಿಂದ ಸಿಎಸ್ ಆರ್ ನಿಧಿ ಅಗತ್ಯವಿರುವ ಕಾರ್ಯಗಳಿಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ ಹಾಗೂ ಯಾವ ಕಂಪೆನಿ ಎಷ್ಟು ಹಣ ನೀಡಿದೆ, ಯಾವುದಕ್ಕೆ ಬಳಕೆಯಾಗಿದೆ ಎನ್ನುವ ಮಾಹಿತಿ ಒಂದೇ ವೇದಿಕೆಯಲ್ಲಿ ಸರ್ಕಾರಕ್ಕೆ ದೊರೆಯಲಿದೆ.
ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಕಾಂಕ್ಷ ಪೋರ್ಟಲ್‍ಗೆ ಚಾಲನೆ ನೀಡಿ, ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಕಾರ್ಪೋರೇಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರವನ್ನು ಶ್ಲಾಘಿಸಿದರು.
ರಾಜ್ಯದಲ್ಲಿ ಆರೋಗ್ಯ ವಲಯಕ್ಕೆ ಈಗಾಗಲೆ ಸಿಎಸ್ ಆರ್ ನಿಧಿಯನ್ನು 175 ಕೋಟಿ ರೂ. ಸಂಗ್ರಹಿಸಲಾಗಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುಎನ್ ಡಿಪಿಯು ಈ ಪೋರ್ಟಲ್ ಸೃಜನೆಯಲ್ಲಿ ನೆರವು ನೀಡಿದ್ದು, ಈ ಪೋರ್ಟಲ್ ನಲ್ಲಿ ಸುಲಭವಾಗಿ ಹಾಗೂ ಪಾರದರ್ಶಕವಾಗಿ ಸಿಎಸ್ ಆರ್ ನಿಧಿ ಬಳಕೆಗೆ ಅನುವು ಮಾಡಿಕೊಡಲಾಗಿದೆ ಎಂದು ಸಿಎಂ ಬಿಎಸ್ ವೈ ಹೇಳಿದರು.
ದೇಶದಲ್ಲಿಯೇ ಪ್ರಥಮಬಾರಿಗೆ ಇಂತಹ ಪೋರ್ಟಲ್ ಅನ್ನು ಸಿದ್ದಪಡಿಸಲಾಗಿದ್ದು, ಕೋವಿಡ್ ನಿರ್ವಹಣೆ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಇದು ಪೂರಕವಾಗಿದೆ. ವಿಶ್ವಸಂಸ್ಥೆಯು ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ವಿಷನ್ 2030 ಅನ್ನು ತಯಾರಿಸಲಾಗಿದೆ. ಇದಕ್ಕಾಗಿ ಬೇಡಿಕೆ ಇರುವ 75 ಸಾವಿರ ಕೋಟಿ ರೂ. ಅನುದಾನದ ಪೈಕಿ 61 ಸಾವಿರ ಕೋಟಿ ರೂ. ಗಳನ್ನು ಅಯವ್ಯಯದಲ್ಲಿ ಒದಗಿಸಲಾಗಿದೆ. ಕಳೆದ ಸಾಲಿನಲ್ಲಿ ಆರೋಗ್ಯ ವಲಯದ ಚಟುವಟಿಕೆಗೆ 11, 527 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಪ್ರಸಕ್ತ ಸಾಲಿಗೆ 11,650 ಕೋಟಿ ರೂ. ಒದಗಿಸಲಾಗಿದೆ ಎಂದು ಸಿಎಂ ಬಿಎಸ್ ವೈ ಹೇಳಿದರು.
ಕೋವಿಡ್ -19 ರ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನಿರ್ಬಂಧದಿಂದ ಭಾದಿತರಾದವರಿಗೆ 1250 ಕೋಟಿ ರೂ. ಗಿಂತ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಿಸಲಾಗಿದೆ. 2.06 ಲಕ್ಷ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, 956 ಕೋಟಿ ರೂ. ವೆಚ್ಚವನ್ನು ಭರಸಲಾಗುತ್ತಿದೆ. ಕೊರೋನಾ ಸಂಕಷ್ಟಕ್ಕೆ ನೆರವಾಗಲು ಬಯಸುವವರು ಹಾಗೂ ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು ನೀಡಲು ಬಯಸುವ ದಾನಿಗಳು ಆಕಾಂಕ್ಷ ಪೋರ್ಟಲ್ ಮೂಲಕ ನೀಡಬಹುದು. ತಾಲ್ಲೂಕು, ಜಿಲ್ಲಾ ಮಟ್ಟದ ಆಸ್ಪತ್ರೆಗಳ ಅಭಿವೃದ್ಧಿಗೆ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ, ಕೇಂದ್ರ ಸರ್ಕಾರ ಗುರುತಿಸಿರುವ 2 ಮಹಾತ್ವಾಕಾಂಕ್ಷೆ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಹಾಗೂ 114 ಹಿಂದುಳಿದು ತಾಲ್ಲೂಕುಗಳಿಗೆ ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಜನೋಪಯೋಗಿ ಕಾರ್ಯಗಳಿಗೆ ಬೇಕಾದ ಅಗತ್ಯತೆಗಳನ್ನು ಈಗಾಗಲೆ ವಿವಿಧ ಇಲಾಖೆಯವರು ಆಕಾಂಕ್ಷ ಪೋರ್ಟಲ್ ನಲ್ಲಿ ಅವಳಡಿಸಿರುತ್ತಾರೆ. ಹಾಗಾಗಿ ಈ ಪೋರ್ಟಲ್ ಮೂಲಕ ದಾನಿಗಳು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಹಾಗೂ ದರ್ಪನ್ ಪೋರ್ಟಲ್ ನಲ್ಲಿ ನೋಂದಾಯಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ಆನ್ ಲೈನ್ ಸಂಪರ್ಕವನ್ನು ಸಾಧಿಸಿ ತ್ವರಿತವಾಗಿ ನಾಡಿನ ಜನರಿಗೆ ಸಹಕಾರ ನೀಡಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ವರ್ಚುವಲ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ಅವರು ಮಾತನಾಡಿ, ಕರ್ನಾಟಕ ವಿವಿಧ ವಲಯಗಳಲ್ಲಿ ಮುಂಚೂಣಿಯಲ್ಲಲಿರವ ರಾಜ್ಯ. ಕರ್ನಾಟಕ ಪ್ರಾರಂಭಿಸಿರುವ ಆಕಾಂಕ್ಷ ಪೋರ್ಟಲ್, ಸಿಎಸ್ ಆರ್ ನಿಧಿ ಅಗತ್ಯವಿರುವ ಜಿಲ್ಲೆಗಳ ಅಭಿವೃದ್ಧಿಗೆ ಬಳಕೆ ಮಾಡಲು ನೆರವಾಗಲಿದೆ. ರಾಜ್ಯದ ಎಲ್ಲ ಭಾಗಗಳ ಸಮಾನ ಅಭಿವೃದ್ಧಿಗೂ ಇದು ಅವಕಾಶವಾಗಲಿದೆ ಎಂದು ಹೇಳಿದರು.
ಸಿಎಸ್ ಆರ್ ನಿಧಿ 10 ಸಾವಿರ ಕೋಟಿ ರೂ. ಗೆ ಹೆಚ್ಚಿಸುವ ಗುರಿ
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಮಾತನಾಡಿ, ಯೋಜನಾ ಇಲಾಖೆಯು ಯುಎನ್‍ಡಿಪಿ ಸಹಯೋಗದೊಂದಿಗೆ ಸಿಎಸ್‍ಆರ್ ಅನುದಾನವನ್ನು ಪಡೆಯಲು ಆಕಾಂಕ್ಷ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು, ಮುಖ್ಯಮಂತ್ರಿಗಳು 2021-22 ನೇ ಸಾಲಿನ ಮುಂಗಡ ಪತ್ರದಲ್ಲಿ ಘೋಷಿಸಿದಂತೆ ಸಿಎಸ್‍ಆರ್ ನೀತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ಕಾರ್ಯಕ್ರಮವನ್ನು ಇಂದಿನಿಂದ ಜಾರಿಗೆ ತರಲಾಗುತ್ತಿದೆ. ಕೇಂದ್ರ ಸರ್ಕಾರ ಕಾರ್ಪೋರೇಟ್ ಆಫೇರ್ಸ್ ಮಂತ್ರಾಲಯದ ತಂತ್ರಾಂಶದಂತೆ, ಕರ್ನಾಟಕದಲ್ಲಿ 2,588 ಕಂಪೆನಿಗಳು ವರ್ಷಕ್ಕೆ ನೀಡಬೇಕಾದ ಸಿಎಸ್‍ಆರ್ ನಿಧಿ 5,024 ಕೋಟಿ ರೂ. ಆಗಿರುತ್ತದೆ. ಅದರಲ್ಲಿ ಈ ವರೆಗೆ 4,354 ಕೋಟಿ ರೂ. ಮಾತ್ರ ಖರ್ಚು ಮಾಡಿರುತ್ತಾರೆ. ಈ ಪೈಕಿ ಶಿಕ್ಷಣ ಮತ್ತು ಪರಿಸರ ಸುಸ್ಥಿರತೆಯು ಸಿಎಸ್‍ಆರ್ ಯೋಜನೆಗಳ ಆದ್ಯತೆ ಕ್ಷೇತ್ರಗಳಾಗಿವÉ. ಪ್ರಸ್ತುತ ಆಕಾಂಕ್ಷ ಪೋರ್ಟಲ್‍ನಲ್ಲಿ 1,194 ಕೋಟಿ ರೂ. ಮೌಲ್ಯದ ಕೋವಿಡ್ -19 ನಿರ್ವಹಣೆ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೆ ಪ್ರಸ್ತುತ ಸಿಎಸ್‍ಆರ್ ನಿಧಿ 5 ಸಾವಿರ ಕೋಟಿ ರೂ. ನಷ್ಟಿದ್ದು, ಮುಂದಿನ ಸಾಲಿನಲ್ಲಿ ಇದನ್ನು 10 ಸಾವಿರ ಕೋಟಿ ರೂ. ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಕಂಪೆನಿಗಳು ಮತ್ತು ಎನ್‍ಜಿಒಗಳು ಈ ಪೋರ್ಟಲ್ ಅನ್ನು ರಾಜ್ಯದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದರು.
ಯುಎನ್‍ಡಿಪಿ ಪ್ರತಿನಿಧಿ ಶೋಕೊ ನೊಡಾ ಮಾತನಾಡಿ, ಕೋವಿಡ್-19 ನ ಈ ಸಂಕಷ್ಟ ಸಮಯದಲ್ಲಿ ಸರ್ಕಾರ, ಕಾರ್ಪೋರೇಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ನಾಗರಿಕರು ಜೊತೆಯಾಗಿ ಕೆಲಸ ಮಾಡುವ ಅಗತ್ಯವಿದೆ. ಇದಕ್ಕೆ ಆಕಾಂಕ್ಷ ಪೋರ್ಟಲ್ ಸಹಕಾರಿಯಾಗಲಿದೆ. ಇತರರಿಗೂ ಇದು ಮಾದರಿಯಾಗಲಿದೆ ಎಂದು ಹೇಳಿದರು.
ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಸಿಎಸ್ ಆರ್ ನೆರವಿನ ನೋಡಲ್ ಅಧಿಕಾರಿ ಉಮಾ ಮಹದೇವನ್ ಮತ್ತಿತರರು ಉಪಸ್ಥಿತರಿದ್ದರು.
Key words: CM BS Yeddyurappa- CSR- facility- online- platform –akanksha portal.