ಬೆಂಗಳೂರು,ಜುಲೈ,2,2021(www.justkannada.in): ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆ ಈಗಾಗಲೇ ರಾಜ್ಯದಲ್ಲಿ ಅನ್ ಲಾಕ್ 2 ಜಾರಿಯಲ್ಲಿದ್ದು ಅನ್ ಲಾಕ್ 3 ಜಾರಿ ಮಾಡುವ ಸಂಬಂಧ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಲಿದ್ದಾರೆ.
ಇಂದು ಸಂಜೆ 5.30ಕ್ಕೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಉಸ್ತುವಾರಿ ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಲಿದ್ದಾರೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದು ಇವರ ಜತೆ ಚರ್ಚಿಸಿ ಅನ್ ಲಾಕ್ 3 ಬಗ್ಗೆ ನಿರ್ಧಾರ ಮಾಡಲಿದ್ದಾರೆ. .
ರಾಜ್ಯದಲ್ಲಿ ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಇಳಿಕೆ ಹಿನ್ನಲೆ, ಜು.5ರಿಂದ ಅನ್ವಯವಾಗುವಂತೆ ಸರ್ಕಾರ ಮೂರನೇ ಹಂತದ ಅನ್ ಲಾಕ್ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಬಹುತೇಕ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ನೀಡಿದ್ದು, ಶಾಪಿಂಗ್ ಮಾಲ್ಗಳು, ಥಿಯೇಟರ್ ಗಳು ಸೇರಿ ಮುಚ್ಚಲ್ಪಟ್ಟಿರುವ ಅನೇಕ ಚಟುವಟಿಕೆಗಳಿಗೆ ಅನುಮತಿ, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಅವಕಾಶ, ಹೋಟೆಲ್ ಗಳ ಸಮಯ ವಿಸ್ತರಣೆ ಸೇರಿದಂತೆ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಈ ಬಾರಿ ವಾಣಿಜ್ಯ ಚಟುವಟಿಕೆಗಳ ಸಮಯಾವಕಾಶ ವಿಸ್ತರಣೆಯಾಗಲಿದ್ದು, ಸೋಮವಾರದಿಂದ ಬಹುತೇಕ ಎಲ್ಲ ಹಂತದ ಚಟುವಟಿಕೆಗಳೂ ಪುನಾರಂಭಗೊಳ್ಳುವ ಲಕ್ಷಣ ಗೋಚರವಾಗುತ್ತಿದೆ. ಇನ್ನು ಮೈಸೂರಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಮೈಸೂರು ಅನ್ಲಾಕ್ ಭವಿಷ್ಯವೂ ಸಿಎಂ ಕೈಯಲ್ಲಿದೆ. ಹೀಗಾಗಿ ಮೈಸೂರು ಜಿಲ್ಲೆಗೂ ಅನ್ವಯಿಸುತ್ತಾ ಅನ್ಲಾಕ್ 3 ಎಂಬುದನ್ನ ಕಾದು ನೋಡಬೇಕಿದೆ.
Key words: CM BS yeddyurappa-meeting- today -unlock 3- permit- many activities.