ಬೆಂಗಳೂರು,ನ,20,2019(www.justkannada.in): ಕುರುಬ ಸಮುದಾಯದ ವಿರುದ್ದ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ ಕ್ಷಮೆ ಕೇಳಿದ್ದಾರೆ.
ಸಚಿವ ಮಾಧುಸ್ವಾಮಿ ಪರ ಕ್ಷಮೆಯಾಚಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವರ ಹೇಳಿಕೆಗೆ ನಾನು ಕುರುಬ ಸಮುದಾಯದ ಬಳಿ ಕ್ಷಮೆ ಕೋರುತ್ತೇನೆ. ಸಚಿವ ಮಾಧುಸ್ವಾಮಿ ಸಹ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಕನಕದಾಸರು ಶ್ರೇಷ್ಠ ಸಂತರು. ಹೇಳಿಕೆ ಬಗ್ಗೆ ಗೊಂದಲ ಸೃಷ್ಠಿಸುವುದು ಬೇಡ. ಹುಳಿಯಾರು ಸರ್ಕಲ್ ಗೆ ಕನಕದಾಸರ ಹೆಸರಿಡಲು ಯಾವುದೇ ತಕರಾರು ಇಲ್ಲ. ಸಚಿವ ಮಾಧುಸ್ವಾಮಿ ಅವರ ತಕರಾರು ಇಲ್ಲ ಎಂದು ತಿಳಿಸಿದರು.
ಹುಳಿಯಾರು ಪಟ್ಟಣದ ಸರ್ಕಲ್ ಗೆ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ಸದ್ಯ ವಿವಾದ ಉದ್ಭವಿಸಿತ್ತು, ಈ ಕುರಿತು ಚರ್ಚೆ ನಡೆಸಲು ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ್ದ ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ, 15 ವರ್ಷಗಳಿಂದ ಆ ವೃತ್ತವನ್ನು ಕನಕವೃತ್ತ ಎಂದು ಕರೆಯಲಾಗುತ್ತಿದೆ. ಆದರೆ ಈಗ ಆ ಸ್ಥಳಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಲು ಮುಂದಾಗಿದ್ದಾರೆ. ಬೇರೆ ವೃತ್ತಕ್ಕೆ ಶಿವಕುಮಾರ ಸ್ವಾಮೀಜಿ ಅವರ ಹೆಸರಡಲಿ. ಈ ವೃತ್ತ ಕನಕವೃತ್ತ ಎಂದು ಮುಂದುವರೆಯಲಿ ಎಂದು ಸಲಹೆ ನೀಡಿದ್ದರು.
ಈ ವೇಳೆ ಏರುಧ್ವನಿಯಲ್ಲಿ ಮಾತನಾಡಿದ್ದ ಸಚಿವ ಮಾಧುಸ್ವಾಮಿ, ‘ನೀವು ಧಮ್ಕಿ ಹಾಕುತ್ತೀರ. ನಾನೂ ಹೋರಾಟಗಾರನೇ. ಕಾನೂನು ಬಿಟ್ಟು ಹೋಗುವುದಿಲ್ಲ. ಕಾನೂನಿಗೆ ಆದ್ಯತೆ ನೀಡುವೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಸಚಿವ ಮಾಧುಸ್ವಾಮಿ ಕ್ಷಮೆಯಾಚಿಸಬೇಕು ಎಂದು ಕುರುಬ ಸಮುದಾಯ ಪಟ್ಟು ಹಿಡಿದಿತ್ತು.
Key words: CM BS Yeddyurappa- Minister Madhuswamy- apologized -shepherd community.