ಮಂಡ್ಯ ಏಪ್ರಿಲ್,29,2021(www.justkannada.in): ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಮಾಡಿದ ಮನವಿಗೆ ಸ್ಪಂದಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಮಂಡ್ಯ ಜಿಲ್ಲೆಗೆ ಹೆಚ್ಚುವರಿ 50 ವೆಂಟಿಲೇಟರ್ ಪೂರೈಕೆಗೆ ಆದೇಶ ಹೊರಡಿಸಿದ್ದಾರೆ.
ಕೋವಿಡ್ ನಿಯಂತ್ರಣ ಸಂಬಂಧ ಸಚಿವರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಡಿಯೊ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು, ಜಿಲ್ಲೆಯಲ್ಲಿ ಎಲ್ಲವು ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಪ್ರಸ್ತುತ ಮಂಡ್ಯ ಜಿಲ್ಲೆಗೆ ವೆಂಟಿಲೇಟರ್ ಅಗತ್ಯವಿದೆ. ತಕ್ಷಣಕ್ಕೆ ಹೆಚ್ಚುವರಿಯಾಗಿ ಬೇಕಾಗಿರುವ ವೆಂಟಿಲೇಟರ್ ಪೂರೈಸಿದರೆ ಕೊರೊನಾ ಸೋಂಕಿತರಿಗೆ ಸಾಕಷ್ಟು ಅನುಕೂಲವಾಗಲಿದೆ. ತಕ್ಷಣ ವೆಂಟಿಲೇಟರ್ ವ್ಯವಸ್ಥೆ ಮಾಡಿಸಿಕೊಡಿ ಎಂದು ಸಿಎಂ ಬಿಎಸ್ ವೈ ಬಳಿ ಮನವಿ ಮಾಡಿದರು.
ಸಚಿವರು ಮನವಿ ಮಾಡಿ ಒಂದು ಗಂಟೆಯೊಳಗೆ ಮಂಡ್ಯ ಜಿಲ್ಲೆಗೆ ವೆಂಟಿಲೇಟರ್ ಪೂರೈಕೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಇಂದೇ ಹೆಚ್ಚುವರಿ 50 ವೆಂಟಿಲೇಟರ್ ಮಂಡ್ಯ ಜಿಲ್ಲೆಗೆ ಬರಲಿದೆ. ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಸಚಿವ ಡಾ. ನಾರಾಯಣಗೌಡ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದರು. ಮೊದಲಿನಿಂದಲು ಮಂಡ್ಯ ಜಿಲ್ಲೆ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಮುಖ್ಯಮಂತ್ರಿಗಳು ಕೊರೊನಾ ಸಂದರ್ಭದಲ್ಲೂ ಅಷ್ಟೇ ಕಾಳಜಿ ವಹಿಸುತ್ತಿರುವುದಕ್ಕೆ ಸಚಿವ ನಾರಾಯಣಗೌಡ ಧನ್ಯವಾದ ಹೇಳಿದರು.
Key words: CM BS yeddyurappa- responded – minister- request-additional -50 ventilator- supply – Mandya district