ಬೆಂಗಳೂರು,ಜೂ,11,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆ ಸಂಬಂಧ ಯಾದಗಿರಿ ಜಿಲ್ಲೆಯಲ್ಲಿ ರೈತರೊಬ್ಬರ ಖಾತೆಗೆ ಹಾಕಲಾಗಿದ್ದ ಹಣವನ್ನ ವಾಪಸ್ ಪಡೆಯಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ಕುರಿತು ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ. ಪ್ರತಿ ಸಾಲಮನ್ನಾ ನಂತರ ರಾಜ್ಯ ಸರ್ಕಾರ ನಡೆಸುವ ಆಡಿಟ್ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ವರೆಗೆ 13988 ರೈತರ ಸಾಲ ಖಾತೆಗಳಲ್ಲಿ ಈ ಗೊಂದಲ ಉಂಟಾಗಿದೆ. ಸ್ಥಳೀಯ ಬ್ಯಾಂಕುಗಳು ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ, ಜೂನ್ 14ರಂದು ಮಧ್ಯಾಹ್ನ 2.30 ಗಂಟೆಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆ ಕರೆಯಲಾಗಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ರೈತರ ಸಾಲ ಮನ್ನಾ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರವು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರದಿಂದ ಈ ಗೊಂದಲ ಉಂಟಾಗಿಲ್ಲ. ಹಾಗೂ ಚುನಾವಣೆಗೂ ಈ ಗೊಂದಲಕ್ಕೂ ಸಂಬಂಧವಿಲ್ಲ ಎನ್ನುವುದನ್ನೂ ಈ ಮೂಲಕ ಸ್ಪಷ್ಟಪಡಿಸಿದೆ. ಮಾಧ್ಯಮಗಳು ಇಂತಹ ವಿಷಯಗಳನ್ನು ಅಧಿಕೃತ ಮಾಹಿತಿ ಪಡೆದುಕೊಂಡ ನಂತರವೇ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
Key words: CM HD Kumaraswamy clarified news of Debt relief
#CMHDKumaraswamy #clarified #media #news #Debtrelief