ಬೆಂಗಳೂರು, ಜೂ,12,2019(www.justkannada.in): ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಹಲವು ಸೂಚನೆ, ಸಲಹೆಗಳನ್ನ ನೀಡಿದರು. ಸಭೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿದ ಸೂಚನೆಗಳು ಈ ಕೆಳಕಂಡಂತಿವೆ.
- ರಾಜ್ಯದಲ್ಲಿ ಸತತವಾಗಿ ಬರಗಾಲ ತಲೆದೋರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಆಂದೋಲನದ ಮಾದರಿಯಲ್ಲಿ ರೂಪಿಸಬೇಕು.
- ಮಳೆನೀರು ಸಂಗ್ರಹಣೆಗೆ ಆದ್ಯತೆ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಡಿಯೂ ಇಂತಹ ಕಾಮಗಾರಿಗಳಿಗೆ ಉತ್ತೇಜನ ನೀಡಬೇಕು.
- ನೀರಿನ ಕೊರತೆ ಎದುರಾಗುವ ಸಂದರ್ಭದಲ್ಲಿ ತಕ್ಷಣ ನೀರು ಒದಗಿಸಲು ಅನುಕೂಲವಾಗುವಂತೆ ಹೆಚ್ಚು ನೀರಿರುವ ಕೊಳವೆಬಾವಿಗಳನ್ನು ಗುರುತಿಸಿ, ಮಾಲೀಕರೊಂದಿಗೆ ಮುಂಚಿತವಾಗಿಯೇ ಒಪ್ಪಂದ ಮಾಡಿಕೊಂಡು, ಅಗತ್ಯತೆ ಎದುರಾದಾಗ ಕೂಡಲೇ ಬಳಸಿಕೊಳ್ಳಲು ಸಿದ್ಧರಾಗಿರಬೇಕು.
- ಎಸ್‍ಡಿಆರ್‍ಎಫ್ ಮಾರ್ಗಸೂಚಿಗಳಲ್ಲಿ ಹಲವು ನಿಬಂಧನೆಗಳನ್ನು ಸಡಿಲಗೊಳಿಸಲಾಗಿದೆ. ಆದ್ದರಿಂದ ಅನುಮೋದನೆಯಾಗಿರುವ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ, ಅನುದಾನ ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಲಾಯಿತು.
- ಆದರೆ ನೀರಿನ ಸಮಸ್ಯೆ ಪರಿಹಾರಕ್ಕೆ ಕೊಳವೆ ಬಾವಿ ಕೊರೆಯುವುದು ಕಟ್ಟ ಕಡೆಯ ಆಯ್ಕೆಯಾಗಿರಬೇಕು ಎಂದು ನಿರ್ದೇಶನ ನೀಡಲಾಯಿತು.
- ಟ್ಯಾಂಕರ್ ನೀರು ಪೂರೈಕೆ ಬಿಲ್ಲುಗಳನ್ನು ಹದಿನೈದು ದಿನದೊಳಗಾಗಿ ಪಾವತಿಸಬೇಕು. ಒಂದೇ ಅವಧಿಯ ಬಿಲ್ಲುಗಳು ಮತ್ತೆ ಸಲ್ಲಿಕೆಯಾದರೆ, ಗ್ರಾಮ ಪಂಚಾಯಿತಿಯ ಅನುದಾನದಿಂದಲೇ ವೆಚ್ಚ ಭರಿಸುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಟ್ಯಾಂಕರುಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ. ಇದನ್ನು ಖಾತರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
- ರಾಜ್ಯಮಟ್ಟದ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳು, ಬರ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸಬೇಕು. ಜನರ ಕುಂದುಕೊರತೆಗಳಳನ್ನು ಪರಿಹರಿಸಬೇಕು.
- ಕೇಂದ್ರ ಸರ್ಕಾರವು 2018ರ ಮುಂಗಾರು ಹಂಗಾಮಿಗೆ 949 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದ್ದು, ಈ ವರೆಗೆ 651 ಕೋಟಿ ರೂ. ಇನ್‍ಪುಟ್ ಸಬ್ಸಿಡಿ ಪಾವತಿ ಮಾಡಲಾಗಿದೆ. ಇನ್ನು ನಾಲ್ಕೈದು ದಿನಗಳೊಳಗೆ ಬಾಕಿ ಮೊತ್ತ ಪಾವತಿಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
- ಹೋಬಳಿ ಮಟ್ಟದಲ್ಲಿ ಕಡ್ಡಾಯವಾಗಿ ಕಂದಾಯ ಅದಾಲತ್, ಪಿಂಚಣಿ ಅದಾಲತ್ ನಡೆಸುವುದು ಕಡ್ಡಾಯ.
- ಹಿರಿಯ ನಾಗರಿಕರಿಗೆ ಮನೆ ಮನೆ ಸಮೀಕ್ಷೆ ನಡೆಸಿ, ವೃದ್ಧಾಪ್ಯ ವೇತನ ನೀಡುವ ಕಾರ್ಯವನ್ನು ಉತ್ತರ ಕನ್ನಡದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. ಈ ಪ್ರಯತ್ನವನ್ನು ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳೂ ಮಾಡಬೇಕು.
- ಭೂಪರಿವರ್ತನೆ ಮತ್ತಿತರ ಕಂದಾಯ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
- ಕೈಗಾರಿಕೆಗಳಿಗೆ ಭೂ ಪರಿವರ್ತನೆ ಮಾಡಿಕೊಡುವ ವಿಚಾರದಲ್ಲಿ ಅರ್ಜಿದಾರರಿಗೆ ಕಿರುಕುಳ ನೀಡಬೇಡಿ. ಅವರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ತಿಳಿಸಲಾಯಿತು.
13.ಸರ್ಕಾರಿ ಶಾಲೆ, ಆಟದ ಮೈದಾನ, ಸ್ಮಶಾನ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲುಸರ್ಕಾರಕ್ಕೆ ಮುಂದಿನ ಹತ್ತು ವರ್ಷಗಳ ಅವಧಿಗೆ ಅಗತ್ಯವಿರುವ ಜಮೀನನ್ನು ಈಗಲೇ ನಿಗದಿಪಡಿಸಿ ಆದೇಶ ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ.
14.ಈ ವರ್ಷ ಜಲವರ್ಷವೆಂದು ಘೋಷಿಸಲಾಗಿದೆ. ಗ್ರಾಮಗಳಲ್ಲಿ ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು. ಸ್ವಚ್ಛಮೇವ ಜಯತೆ ಕಾರ್ಯಕ್ರಮದಡಿ ಘನತಾಜ್ಯ ವಿಲೇವಾರಿಯನ್ನು ಅಕ್ಟೊಬರ್ ಮಾಹೆಯೊಳಗೆ ಅನುಷ್ಠಾನಕ್ಕೆ ಸೂಚನೆ.ನಿಗದಿತ ಗುರಿ ಮುಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
15.ಜಲಾಮೃತ ಯೋಜನೆಯಡಿ ರೈತರ ಸಹಭಾಗಿತ್ವದಲ್ಲಿ ಕೆರೆಗಳ ಹೂಳೆತ್ತಲು ಯಂತ್ರದ ವೆಚ್ಚ ಭರಿಸಲು ಅವಕಾಶವಿದೆ. ಇದಕ್ಕಾಗಿ 100 ಕೋಟಿ ರೂ.ಗಳ ಅನುದಾನ ಲಭ್ಯವಿದೆ. ಹೂಳನ್ನು ರೈತರು ತೆಗೆದುಕೊಂಡು ಹೋಗಬಹುದು. ಈ ಸಂಬಂಧ ಪ್ರಸ್ತಾವನೆಗಳನ್ನು ಸಲ್ಲಿಸಲು ತಿಳಿಸಿದರು.ಈ ಹಣವನ್ನು ತಾಲ್ಲೂಕುವಾರು ಹಂಚಿಕೆ ಮಾಡು ವ ಬಗ್ಗೆ ಪರಿಶೀಲಿಸಲಾಗುವುದು.
- ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ತಿಗಳ ಆವರಣದಲ್ಲಿ ಗಿಡ ನೆಡಲು ಸೂಚನೆ.
17.ಜೂನ್ 20 ರೊಳಗೆ ಗ್ರಾಮ ಪಂಚಾಯಿತಿ ಕ್ರಿಯಾಯೋಜನೆಗಳನ್ನು ಸಲ್ಲಿಸಲು ಗಡುವು.
18.ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಗುಣಮಟ್ಟದ ತರಬೇತಿ ನೀಡಲು ನಿರ್ದೇಶನ
19.ಸಮಾಜ ಕಲ್ಯಾಣ ಇಲಾಖೆಯಡಿ ನಿಗದಿತ ಸಂಖ್ಯೆಗೆ ಸೀಮಿತವಾಗಿ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಒಟ್ಟು 1860 ವಿದ್ಯಾರ್ಥಿ ನಿಲಯಗಳಿದ್ದು, ಈ ಪೈಕಿ 1525 ಸ್ವಂತ ಕಟ್ಟಡದಲ್ಲಿ ನಡೆಯುತ್ತಿದೆ. 342 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡಕ್ಕೆ ನಿವೇಶನ ಗುರುತಿಸಲು ಹಾಗೂ ಮುಂದಿನ 2 ವರ್ಷಗಳಲ್ಲಿ’ ಸಿ’ ವರ್ಗದಲ್ಲಿರುವ ವಿದ್ಯಾರ್ಥಿನಿಲಯಗಳನ್ನು ‘ಎ’ ವರ್ಗಕ್ಕೆ ತರಲು ಸೂಚನೆ.
20.ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆಬಾವಿಗಳಿಗೆ ವಿದ್ಯುದೀಕರಣಕ್ಕೆ ಎಸ್ಕಾಂ ಗಳಲ್ಲಿ 11200 ಪ್ರಕರಣಗಳು ಬಾಕಿ ಇವೆ. ಅಧಿಕಾರಿಗಳು ಸಭೆಗೆ ನೀಡಿರುವ ಮಾಹಿತಿಗೂ ಎಸ್ಕಾಂ ನೀಡಿದ ಮಾಹಿತಿಗೂ ವ್ಯತ್ಯಾಸವಿದೆ. ಎಲ್ಲ ಜಿಲ್ಲಾಧಿಕಾರಿಗಳು ಈ ಅಂಕಿಅಂಶಗಳನ್ನು ಜೂನ್ 20 ರೊಳಗೆ ಮರುಪರಿಶೀಲಿಸಿ ಸಲ್ಲಿಸಲು ಸೂಚನೆ.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ: ಜಿ.ಪರಮೇಶ್ವರ್, ಕಂದಾಯ ಸಚಿವ ಆರ್. ವಿ.ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್.ಹೆಚ್. ಶಿವಶಂಕರರೆಡ್ಡಿ, ತೋಟಗಾರಿಕಾ ಸಚಿವ ಮನಗೂಳಿ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಎಂ.ಟಿ.ಬಿ.ನಾಗರಾಜ್, ಆರೋಗ್ಯ ಸಚಿವ ಶಿವಾನಂದ್,ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಆಹಾರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ , ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯ ಭಾಸ್ಕರ್ ಉಪಸ್ಥಿತರಿದ್ದರು.
Key words: CM HD Kumaraswamy gave instructions to DC and ZP CEOs.
#CMHDKumaraswamy #gave #instructions #DC #ZPCEO #meeting