ಬೆಂಗಳೂರು,ಜು,22,2019(www.justkannada.in): ಅಲ್ಪ ಮತಕ್ಕೆ ಕುಸಿದಿರುವ ರಾಜ್ಯ ಸಮ್ಮಿಶ್ರ ಸರ್ಕಾರ ಅಧಿಕಾರದಿಂದ ನಿರ್ಗಮಿಸಬೇಕು. ಇಲ್ಲವೇ ಬಹುಮತ ಸಾಬೀತುಪಡಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿದ ಪರಿಣಾಮ ವಿಧಾನ ಪರಿಷತ್ ಕಲಾಪವನ್ನು ನಾಳೆಗೆ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ ನ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಗದ್ದಲದ ನಡುವೆಯೇ ಸದನಕ್ಕೆ ಸಭಾನಾಯಕಿ ಜಯಮಾಲಾ ಪೂರಕ ಕಾರ್ಯಕಲಾಪ ಪಟ್ಟಿಯನ್ನು ಸೇರಿಸುವ ಪ್ರಸ್ತಾವ ಮಾಡಿದರು. ಸರ್ಕಾರಿ ಭರವಸೆಗಳ ಸಮಿತಿಗೆ 9 ಸದಸ್ಯರು, ಹಕ್ಕುಬಾದ್ಯತಾ ಸಮಿತಿಗೆ 7, ವಸತಿ ಸಮಿತಿಗೆ 5, ಸದಸ್ಯರ ಖಾಸಗಿ ವಿದೇಯಕಗಳು ಮತ್ತು ನಿರ್ಣಯಗಳ ಸಮಿತಿಗೆ 8, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ 5, ಸಾರ್ವಜನಿಕ ಉದ್ಯಮಗಳ ಸಮಿತಿಗೆ 5, ಅಧೀನ ಶಾಸನ ರಚನಾ ಸಮಿತಿಗೆ 5,ಅನುಸೂಚಿತ ಜಾತಿ ಮತ್ತು ಪಂಗಡ ಕಲ್ಯಾಣ ಸಮಿತಿಗೆ 5, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ 5 ಸದಸ್ಯರನ್ನು ದಾಮಾಷಾ ಪ್ರಾತಿನಿಧ್ಯದ ತತ್ವಕ್ಕನುಸಾರವಾಗಿ ವರ್ಗಾಯಿಸಬಹುದಾದ ಏಕಮತದ ಮೂಲಕ ಚುನಾಯಿಸಬೇಕು ಎನ್ನುವ ಚುನಾವಣಾ ಪ್ರಸ್ತಾವನೆಗಳನ್ನೊಳಗೊಂಡ ಸೂಚನೆಯನ್ನು ಸದನದಲ್ಲಿ ಮಂಡಿಸಿದರು.
ಗದ್ದಲ,ಗೊಂದಲದ ನಡುವೆಯೇ ಪೂರಕ ಪಟ್ಟಿಯಲ್ಲಿ ಇದ್ದ ಚುನಾವಣಾ ಪ್ರಸ್ತಾಪಗಳು ಸದನಕ್ಕೆ ಮಂಡಿಸಿದ ನಂತರ ಸದನವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ನಾಳೆ ಬೆಳಗ್ಗೆ 11.30 ಕ್ಕೆ ಮುಂದೂಡಿಕೆ ಮಾಡಿದರು.
Key words: CM HD Kumaraswamy- resignation –bjp- legislative council-adjourned