ಬೆಂಗಳೂರು,ಮೇ,14,2019(www.justkannada.in): ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಗುಣಗಾನ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಒಳ್ಳೆಯವರೇ ಆದರೆ ಅವರು ಇರುವ ಪಕ್ಷ ಮಾತ್ರ ಸರಿ ಇಲ್ಲ. ಬಿಜೆಪಿ ನಿಂತಿರುವುದೇ ಬಿಎಸ್ ಯಡಿಯೂರಪ್ಪನ ಬಲದ ಮೇಲೆ ಎಂದು ಸಿಎಂ ಇಬ್ರಾಹಿಂ ಹೊಗಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಿಎಂ ಇಬ್ರಾಹಿಂ, ಮೇ 23 ಚುನಾವಣಾ ಫಲಿತಾಂಶದ ಬಳಿಕ ಯಡಿಯೂರಪ್ಪ ಅವರೇ ಪಕ್ಷ ಬಿಟ್ಟು ಹೊರ ಬರುತ್ತಾರೆ. ಅಧಿಕಾರವಿಲ್ಲದ ಪಕ್ಷದಲ್ಲಿ ಯಾರೂ ಉಳಿಯುವುದಿಲ್ಲ. ಬಿಜೆಪಿ ನಿಂತಿರುವುದೇ ಯಡಿಯೂರಪ್ಪರ ಬಲದ ಮೇಲೆ. ಬಿಎಸ್ ವೈ ಒಳ್ಳೆಯವರು ಎಂದಿದ್ದಾರೆ.
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ವಾಕ್ಸಮರ ಕುರಿತು ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ, ಈಗ ಇಬ್ಬರ ನಡುವೆ ನಡೆಯುತ್ತಿರುವುದು ತೋರಿಕೆಯ ಕಲಹ ಮಾತ್ರ. ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ 35 ವರ್ಷದ ಸ್ನೇಹಿತರು. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಎಲ್ಲವೂ ಸರಿ ಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ ವೀರಶೈವ ಲಿಂಗಾಯಿತರಿಗೆ ಬಿಜೆಪಿ ಅನ್ಯಾಯ ಮಾಡಿದೆ. 8 ಎಂಪಿಗಳಿದ್ದರೂ ಒಬ್ಬರಿಗೂ ಮಂತ್ರಿ ಮಾಡಲಿಲ್ಲ. ಈಗ ಬಿಜೆಪಿಯಲ್ಲೂ ಒಂದು ಬಣ ಯಡಿಯೂರಪ್ಪ ವಿರುದ್ಧ ಕೆಲಸ ಮಾಡುತ್ತಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಿಎಂ ಇಬ್ರಾಹಿಂ ಆರೋಪಿಸಿದರು.
Key words: CM Ibrahim- leader- praised -BJP –state- president -BS Yeddyurappa.