ಚೆನ್ನಪಟ್ಟಣ, ನ.06,2024: (www.justkannada.in news) ಉಪ ಚುನಾಚಣೆ ಪ್ರಚಾರದಲ್ಲಿ ಜೆಡಿಎಸ್ ಯುವ ನಾಯಕರಾದ ಪ್ರಜ್ವಲ್ ಹಾಗೂ ಸೂರಜ್ ರೇವಣ್ಣ ಹೆಸರು ಪ್ರಸ್ತಾಪ ಮಾಡಿದ ಕಾಂಗ್ರೆಸ್. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕುಡ್ಲೂರು ಗ್ರಾಮದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಕ್ಕಳ ಹೆಸರು ಪ್ರಸ್ತಾಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಹೈಲೈಟ್ಸ್…
ದೇವೇಗೌಡ್ರು ಹೇಳಿದ್ರು ಕಟುಕರಿಗೆ ಕಣ್ಣೀರು ಬರಲ್ಲ ಅಂತ. ಹಾಸನದಲ್ಲಿ ನಿಮ್ಮ ಮೊಮ್ಮಕ್ಕಳ ದೌರ್ಜನ್ಯಕ್ಕೆ ಒಳಗಾದ ನೂರಾರು ಮಂದಿ ಕಣ್ಣೀರು ಹಾಕುತ್ತಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನೂರಾರು ಹೆಣ್ಣುಮಕ್ಕಳು ಕಣ್ಣೀರು ಹಾಕ್ತಿದ್ದಾರೆ. ಅಲ್ಲಿ ಹೋಗಿ ಅಳ್ರಿ ಗೌಡ್ರೆ. ಇಲ್ಲಿ ಅತ್ತರೆ ಏನು ಪ್ರಯೋಜನ?
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋತಿದ್ದ, ನಂತರ ರಾಮನಗರದಲ್ಲಿ ಸೋತಿದ್ದ ನಿಖಿಲ್ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಅಳು ನಮ್ಮ ಪರಂಪರೆ, ನೀನು ಅಳೋಕೆ ಶುರು ಮಾಡು ಎಂದು ನಿಖಿಲ್‌ಗೆ ಹೇಳಿಕೊಟ್ಟಿದ್ದಾರೆ. ಸೋಲಿನ ಭಯ ಕಾಡುತ್ತಿದೆ ಅದಕ್ಕೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಯೋಗೇಶ್ವರ್ ಗೆಲ್ಲುವುದು ಶತಸಿದ್ಧ. ಮಾಜಿ ಪ್ರಧಾನಿ ದೇವೇಗೌಡರು ಮೂರ್ನಾಲ್ಕು ದಿನ ರಾಮನಗರದಲ್ಲಿ ಠಿಕಾಣಿ ಹೂಡಿದ್ದಾರೆ. ಏನಾದ್ರೂ ಮಾಡಿ ಮೊಮ್ಮಗನ್ನ ಗೆಲ್ಲಿಸ್ಬೇಕಂತೆ ಹೊರಟಿದ್ದಾರೆ.
ಈ ಕ್ಷೇತ್ರಕ್ಕೆ ರೂ.220 ಕೋಟಿ ಅನುದಾನ ಕೊಟ್ಟವನು ನಾನು. ಬಿಜೆಪಿ ಅನುಮೋದನೆ ಕೊಟ್ಟು ಸುಮ್ಮನಾಗಿದ್ರು. ಯೋಗೇಶ್ವರ್ ಗೆ ಜನರ ಕಷ್ಟಸುಖ ಗೊತ್ತು. ದೇವೇಗೌಡರ ಕುಟುಂಬ ಇದು ಗೊತ್ತಿಲ್ಲ. ಅವರಿಗೆ ಭಾವನಾತ್ಮಕವಾಗಿ ಮಾತಾಡೋದು, ಅಳೋದು ಮಾತ್ರ ಗೊತ್ತು. ಚನ್ನಪಟ್ಟಣದ ಅಭಿವೃದ್ಧಿಗೆ ಯೋಗೇಶ್ವರ್ ಗೆಲ್ಲಬೇಕು.
ನಾನು ಈಗಾಗಲೇ ಕ್ಷೇತ್ರಕ್ಕೆ ರೂ.500 ಕೋಟಿಗೂ ಹೆಚ್ಚು ಕೊಟ್ಟಿದ್ದೀನಿ. ಯೋಗೇಶ್ವರ್ ಗೆದ್ದ ಮೇಲೆ ಮತ್ತಷ್ಟು ಅನುದಾನ ಕೊಡ್ತೀನಿ. ಇನ್ನೂ ಮೂರುವರೆ ವರ್ಷ ನಮ್ಮ ಸರ್ಕಾರವೇ ಇರುತ್ತೆ, ಕುಮಾರಸ್ವಾಮಿ ಸರ್ಕಾರ ಬರಲ್ಲ. ಅನುದಾನ ಕೊಡೋದು ನಾನು, ಡಿ.ಕೆ. ಶಿವಕುಮಾರ್.
ಕೂಲಿ ಮಾಡಿದ್ದೀವಿ, ಓಟ್ ಕೊಡಿ ಅಂತಿದೀವಿ. 5 ಗ್ಯಾರಂಟಿ ಯೋಜನೆ ಕೊಟ್ಡಿದೀವಲ್ವ ನಾವು? ಪ್ರತಿ ತಿಂಗಳು ಎರಡು ಸಾವಿರ ದುಡ್ಡು ಕೊಡ್ತಿರೋದು ನಾನಲ್ವ? ನಿಮಗೆ ಫ್ರೀಯಾಗಿ ಬಸ್ ನಲ್ಲಿ ಓಡಾಡೊ ಹಾಗೆ ಮಾಡಿದ್ದು ನಮ್ಮ ಸರ್ಕಾರ ಅಲ್ವಾ? ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ರಾ?
” ಅಳ ಗಂಡಸನ್ನ ನಂಬಬಾರ್ದು ” ಅಂತ ನಮ್ಮ ಕಡೆ ಒಂದು ಗಾಧೆ ಇದೆ. ಈ ಕುಮಾರಸ್ವಾಮಿ ಅಳುವ ಗಂಡಸು, ಯಾವತ್ತೂ ನಂಬಬೇಡಿ. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತಾ? ಕೆರೆ ನೀರು ತುಂಬುತ್ತಾ? ಜಮೀನಿಗೆ ನೀರು ಹರಿಯುತ್ತಾ?
ಯಾರೂ ನಮ್ಮನ್ನು ಇನ್ವಿಟೇಶನ್ ಕೊಟ್ಟು ರಾಜಕೀಯಕ್ಕೆ ಬನ್ನಿ ಅಂತ ಕರೆದಿಲ್ಲ. ಸೇವೆ ಮಾಡಬೇಕು ಅಂತ ಬಂದಿದೀವಿ. ಗ್ಯಾರಂಟಿ ಯೋಜನೆ ಮೂಲಕ 1.69 ಕೋಟಿ ಕುಟುಂಬಗಳಿಗೆ ನೆರವಾಗುತ್ತಿದ್ದೇವೆ. ಸರ್ಕಾರದ ಸಾಧನೆ ನೋಡಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಬರೆದ ಪತ್ರವನ್ನು ಇದೇ ವೇಳೆ ಮುಖ್ಯಮಂತ್ರಿಗಳು ಸ್ಮರಿಸಿದರು.
ಹಾಸನಾಂಬೆ ಜಾತ್ರೆಗೆ 21 ಲಕ್ಷ ಮಹಿಳೆಯರು ಹೋಗಿದ್ದಾರೆ. 12 ಕೋಟಿ ಆದಾಯ ಬಂದಿದೆಯಂತೆ. ಇದೊಂದು ದಾಖಲೆ. ಇದಕ್ಕೆ ಶಕ್ತಿ ಯೋಜನೆ ಕಾರಣ.
ದುಡ್ಡು ಕೊಡ್ತೀವಿ ಎಂದರೂ ಕೇಂದ್ರದವರು ಅಕ್ಕಿ ಕೊಡಲಿಲ್ಲ. ಈಗಲೂ ಅವರು ಅಕ್ಕಿ ಕೊಟ್ಟರೆ ಜನರಿಗೆ ಅಕ್ಕಿ ಕೊಡುತ್ತೇವೆ. ಇದರಿಂದ ಬಡವರಿಗೆ ಅನುಕೂಲ ಆಗುತ್ತದೆ. ಗ್ಯಾರಂಟಿ ಯೋಜನೆಯನ್ನು ಪರಿಷ್ಕರಣೆ ಮಾಡ್ತಾರೆ ಎಂದು ಬಿಜೆಪಿ- ಜೆಡಿಎಸ್ ಸುಳ್ಳು ಹೇಳುತ್ತಿವೆ. ಕಾಂಗ್ರೆಸ್ ಸರ್ಕಾರ ಇರುವವರೆಗೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ.
ಏನೇ ಕೆಲಸ ಇರಲಿ 13ನೇ ತಾರೀಖು ಮತಗಟ್ಟೆಗೆ ಹೋಗಿ ಯೋಗೇಶ್ವರ್ ಅವರಿಗೆ ಮತ ಹಾಕಿ. ನಿಮ್ಮ ಆಶೀರ್ವಾದ ಯೋಗೇಶ್ವರ್ ಅವರ ಮೇಲಿರಲಿ.
key words: Karnataka, ChannaPatna, by poll, congress leader, CM Siddaramaiah, speech