ಮಂಗಳೂರು ಜನವರಿ,17,2025 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್ ನಲ್ಲಿ ಘೋಷಿಸಿದ್ದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಇಂದು ಶಂಕು ಸ್ಥಾಪನೆ ನೆರವೇರಿಸಿ ಮತ್ತೊಮ್ಮೆ ನುಡಿದಂತೆ ನಡೆದ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಯನ್ನು ಮುಂದುವರೆಸಿದ್ದಾರೆ.
ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜೀವ್ ಗಾಂಧಿ ವಿವಿ, ಏಷ್ಯಾದ ಅತ್ಯಂತ ದೊಡ್ಡ ಆರೋಗ್ಯ ವಿಶ್ವ ವಿದ್ಯಾಲಯ ಆಗಿದೆ. 3.5 ಲಕ್ಷ ವೈದ್ಯ ವಿದ್ಯಾರ್ಥಿಗಳಿರುವ ಅತ್ಯಂತ ದೊಡ್ಡ ಆರೋಗ್ಯ ವಿವಿ ಇದಾಗಿದೆ. ಆದ್ದರಿಂದ ಗುಣಮಟ್ಟದ ವೈದ್ಯರನ್ನು ರೂಪಿಸುವುದರ ಜೊತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ರಾಜೀವ್ ಗಾಂಧಿ ವಿವಿಯ ಕೊಡುಗೆ ಅಪಾರವಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲೂ ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಶುಚಿತ್ವ ಮತ್ತು ನಿರ್ವಹಣೆ ಕಾಪಾಡುವ ಜೊತೆಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಸಿಗುವಂತಾಗಬೇಕು. ಶ್ರೀಮಂತರು ಮತ್ತು ನಮ್ಮಂಥಾ ರಾಜಕಾರಣಿಗಳೂ ಸರ್ಕಾರಿ ಆಸ್ಪತ್ರೆಗೆ ಬರುವಂಥಾಗಬೇಕು ಎನ್ನುವ ದಿಕ್ಕಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದರು.
ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ ಗುರಿ. ಮಂಗಳೂರಿನಲ್ಲಿ ಉತ್ತಮ ಆರೋಗ್ಯ ಸೇವೆ ಇದ್ದರೂ ಈ ಜಿಲ್ಲೆಗೂ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ. ಈ ದಿಕ್ಕಿನಲ್ಲೂ ಸರ್ಕಾರ ಯೋಚಿಸಿ ಕ್ರಮ ಕೈಗೊಳ್ಳಲಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಆರೋಗ್ಯ ಸೇವೆ ಸರಳವಾಗಿ ಜನರಿಗೆ ಸಿಗುವ ದಿಕ್ಕಿನಲ್ಲಿ ಸಂಶೋಧನೆಗಳನ್ನು ಹೆಚ್ಚೆಚ್ಚು ನಡೆಸಬೇಕು. ದೇಶದ ಅತ್ಯುತ್ತಮ ಆರೋಗ್ಯ ಸೇವೆ ಬಡವರಿಗೂ ಸುಲಭವಾಗಿ ಸಿಗುವಂತೆ ಮಾಡಬೇಕು ಎಂದು ಕರೆ ನೀಡಿದರು.
ಈ ಕ್ಷೇತ್ರದ ಡಿಪ್ಲೊಮಾ ಮತ್ತು ಇತರೆ ಕೋರ್ಸ್ ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ವೈದ್ಯ ವಿಜ್ಞಾನ ಪದವೀಧರರೂ ಯುವ ನಿಧಿಗೆ ಅರ್ಹತೆ ಗಳಿಸಿದ್ದಾರೆ. ವೈದ್ಯ ವಿದ್ಯಾರ್ಥಿಗಳು ಇತರೆ ಕ್ಷೇತ್ರಗಳಿಗೆ ವಲಸೆ ಹೋಗದೆ ಆರೋಗ್ಯ ಕ್ಷೇತ್ರದಲ್ಲೇ ತಮ್ಮ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
BPL ಇದ್ದವರಿಗೆ ಉಚಿತ ಸೇವೆ
BPL ಕಾರ್ಡ್ ಇದ್ದವರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಿ ಎನ್ನುವ ಸೂಚನೆಯನ್ನು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಬಡವರಿಗೂ ಕೂಡ ದೊಡ್ಡ ದೊಡ್ಡ ಕಾಯಿಲೆಗಳು ಬರುತ್ತಿವೆ. ಕಿಡ್ನಿ ಕಸಿಗೆ 5000 ಮಂದಿ ಸಾಲಿನಲ್ಲಿದ್ದಾರೆ. ಕಿಡ್ನಿ ದಾನಿಗಳು ಸಿಕ್ಕರೆ ನಿತ್ಯ ಕಿಡ್ನಿ ಕಸಿ ಮಾಡುವ ನುರಿತ ವೈದ್ಯರ ತಂಡ ನಮ್ಮಲ್ಲಿದೆ ಎಂದರು.
ಇಂದು ನಾನು ಶಂಕುಸ್ಥಾಪನೆ ನೆರವೇರಿಸಿರುವ ಪ್ರಾದೇಶಿಕ ಕಚೇರಿಯ ನಿರ್ಮಾಣ ಮತ್ತು ಕಾರ್ಯಕ್ಷಮತೆ ಎರಡೂ ಗುಣಮಟ್ಟದಲ್ಲಿ ಕೂಡಲಿ ಎಂದು ಸೂಚಿಸಿದರು.
Key words: CM Siddaramaiah, Rajiv Gandhi, University of Health Sciences, Regional Office