ಮೈಸೂರಿ,ಫೆಬ್ರವರಿ,1,2025 (www.justkannada.in): ಸಮುದಾಯ ಆರೋಗ್ಯ ಅಧಿಕಾರಿಗಳು ಇಟ್ಟಿರುವ ನ್ಯಾಯಯುತವಾದ ಬೇಡಿಕೆಗಳನ್ನ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಮೈಸೂರಿನ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಗುತ್ತಿಗೆದಾರರ ಸಂಘ ಬೆಂಗಳೂರು ಇವರ ವತಿಯಿಂದ ರಾಜ್ಯ ಮಟ್ಟದ ಸಮುದಾಯ ಆರೋಗ್ಯ ಅಧಿಕಾರಿಗಳ ಸಂರಕ್ಷಣಾ ಸಮಾವೇಶ ನಡೆಯಿತು. ಜ್ಯೋತಿ ಬೆಳಗಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಇದೇ ವೇಳೆ ಸಮುದಾಯ ಆರೋಗ್ಯ ಅಧಿಕಾರಿಗಳು ತಮ್ಮ ಹಲವು ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಮುಂದಿಟ್ಟರು. ಎನ್ ಆರ್.ಎಚ್.ಎಂ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಖಾಯಂ, ವೇತನ ಹೆಚ್ಚಳ, ಖಾಯಂ, ಆರೋಗ್ಯ ವಿಮೆ ಸೇರಿದಂತೆ ಹಲವು ಸೌಲಭ್ಯಗಳ ನಮಗೂ ವಿಸ್ತರಿಸಬೇಕು ಎಂದು ಸಮುದಾಯ ಆರೋಗ್ಯ ಅಧಿಕಾರಿಗಳು ಒತ್ತಾಯಿಸಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಮಂದಿ ಸಮುದಾಯ ಆರೋಗ್ಯ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಆಯುಷ್ಮಾನ್ ಆರೋಗ್ಯ ಮಂದಿರದ ಮೂಲಕ ಗ್ರಾಮೀಣ ಪ್ರದೇಶಶಗಳ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಬಿಪಿ, ಶುಗರ್, ಕ್ಯಾನ್ಸರ್, ಅಪೌಷ್ಟಿಕತೆ, ಸ್ವಚ್ಛತೆ ಸೇರಿದಂತೆ ಇತರೆ ವಿಚಾರಗಳ ಕುರಿತು ಆರೋಗ್ಯ ಸಮುದಾಯ ಅಧಿಕಾರಿಗಳು ಜಾಗೃತಿ ಮತ್ತು ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಮನವಿ ಮಾಡಿದರು.
ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ 7 ಕೋಟಿ ಜನರಿದ್ದೀವಿ ಎನ್ನುವಷ್ಟು ಆರೋಗ್ಯವನ್ನ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಇಲಾಖೆ ಅಧಿಕಾರಿಗಳ, ಸಿಬ್ಬಂದಿಯ ಜವಾಬ್ದಾರಿ. ಸಮುದಾಯ ಅಧಿಕಾರಿಗಳಾಗಿ ನೀವು ಚೆನ್ನಾಗಿ ಕೆಲಸ ಮಾಡಬೇಕು. ತಪಾಸಣೆ ಮಾಡಿ ಏನು ರೋಗ ಇದೆ ಎನ್ನುವುದನ್ನ ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೀರಿ. ಆರೋಗ್ಯದ ಬಗ್ಗೆ ಗಮನ ಕೊಡುವ ಜಾಗೃತಿ ಮೂಡಿಸುವ ಕೆಲಸ ನೀವು ಮಾಡಬೇಕು. ನಮ್ಮ ಸಮಾಜದಲ್ಲಿ ಬಡತನ ಇದೆ. ಬಡವರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಅವರು ಸರ್ಕಾರಿ ಆಸ್ಪತ್ರೆಯ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡುವುದು ನಮ್ಮ ಜವಾಬ್ದಾರಿ. ಖಾಸಗಿ ಆಸ್ಪತ್ರೆಗೆ ಹೋಗಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಬಡ ಜನರಿಗೆ ಆಗಲ್ಲ. ಅದಕ್ಕಾಗಿ ನೀವು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಿವೆನ್ಸನ್ ಈಸ್ ಬೆಟರ್ ದೆನ್ ಕ್ಯೂರ್ ಎನ್ನುವಾಗೆ ಕಾಯಿಲೆ ಬರುವುದಕ್ಕೂ ಮುಂಚೆ ತಡೆಗಟ್ಟಬೇಕು. ಹಿಂದೆ ಇದ್ದ ನಮ್ಮ ಪೂರ್ವಜರು ಹೆಚ್ಚು ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಇತ್ತೀಚೆಗೆ ಆಹಾರ ಪದ್ದತಿಯಿಂದ ಜನರಿಗೆ ಹಲವು ಕಾಯಿಲೆಗಳು ಬರುತ್ತಿವೆ. ಈ ಸಮಸ್ಯೆಗಳ ಎದುರಿಸಿ ನಿಲ್ಲುವಂತ ಕೆಲಸವನ್ನ ಸಿಬ್ಬಂದಿ ಮಾಡಿದರೆ ಸಮುದಾಯ ಆರೋಗ್ಯ ಮಾಡಲು ಸಾಧ್ಯ. ನೀವು ಕೂಡ ಹಲವು ಬೇಡಿಕೆಗಳ ಪಟ್ಟಿಯನ್ನೇ ಇಟ್ಟಿದ್ದೀರಿ. ಸುಮಾರು 6 ಬೇಡಿಕೆಗಳನ್ನು ಇಟ್ಟಿದ್ದೀರಿ. ಇದನ್ನ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಈ ಸರ್ಕಾರ ನಿಮ್ಮ ಜೊತೆ ಇರುತ್ತೆ ಎಲ್ಲರೂ ಕೂಡ ಆರೋಗ್ಯ ರಕ್ಷಣೆ ಮಾಡುವವರು. ನೀವು ಕೊಟ್ಟಿರುವ ನ್ಯಾಯಯುತ ಬೇಡಿಕೆಗಳ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ, ಶಾಸಕ ಕೆ.ಹರೀಶ್ ಗೌಡ, ಎಂಎಲ್ ಸಿ, ಡಾ.ತಿಮ್ಮಯ್ಯ, ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್ ಎಚ್ ಎಂ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಅಮಿತ್ ಗಾಯಕ್ವಾಡ್ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಆರೋಗ್ಯ ಅಧಿಕಾರಿಗಳು ಮತ್ತು ಸಾವಿರಾರು ಆರೋಗ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.
Key words: fulfill, demands,community, health officers , CM Siddaramaiah, mysore